ಅಖಿಲ ಭಾರತ ಕಾರ್ಮಿಕರ ಮುಷ್ಕರ ಹಿನ್ನೆಲೆ: ಹಮಾಲಿ ಕಾರ್ಮಿಕರ ಸಿದ್ಧತಾ ಸಭೆ

ಮಂಗಳೂರು : ಕೇಂದ್ರದ ಬಿಜೆಪಿ ಸರಕಾರ ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ ಸಂಹಿತೆಯಾಗಿ ಜಾರಿಗೊಳಿಸಲು ಹೊರಟಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಕೆ. ಮಹಾಂತೇಶ್ ಹೇಳಿದರು.
ನಗರದ ಹಳೆ ಬಂದರಿನಲ್ಲಿ ಬಂದರು ಶ್ರಮಿಕರ ಸಂಘದ ಕಚೇರಿಯಲ್ಲಿ ಹಮಾಲಿ ಕಾರ್ಮಿಕರ ಮುಷ್ಕರ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಕೇಂದ್ರ ಬಜೆಟ್‌ಗಳಲ್ಲಿ ಹಮಾಲಿ ಕಾರ್ಮಿಕರನ್ನು ನಿರ್ಲಕ್ಷ ಮಾಡಲಾಗಿದೆ. ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಘೋಷಣೆ ಆಗಿಲ್ಲ. ಕೋವಿಡ್ ಪರಿಹಾರ ಇನ್ನೂ ಸಿಕ್ಕಿಲ್ಲ. ಕೋವಿಡ್ ಕಿಟ್ ವಿತರಣೆಯಲ್ಲಿ ನೂರಾರು ಕೋಟಿಗಳ ಭ್ರಷ್ಟಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಮಾ.೨೮ ಮತ್ತು ೨೯ರಂದು ನಡೆಯುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಬೇಕು ಎಂದು ಮಹಾಂತೇಶ್ ಕರೆ ನೀಡಿದರು.
ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್, ಹರೀಶ್ ಕೆರೆಬೈಲ್, ಚಂದ್ರಹಾಸ ಕುತ್ತಾರ್, ಸಿದ್ದೀಕ್ ಬೆಂಗ್ರೆ, ಫಾರೂಕ್ ಉಳ್ಳಾಲಬೈಲ್, ಮಜೀದ್ ಯು.ಬಿ., ಪಿ.ಟಿ. ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.





