ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಹೆಚ್ಚಳ : ಕ್ರೈಡೈ ಕಳವಳ
ಉಡುಪಿ : ೨೦೨೦ರಿಂದ ಕಟ್ಟಡ ನಿರ್ಮಾಣದ ಕಚ್ಛಾವಸ್ತುಗಳ ಬೆಲೆ ನಿರಂತರವಾಗಿ ಏರುತ್ತಿದೆ. ಇದರೊಂದಿಗೆ ಕಾರ್ಮಿಕರ ಕೊರತೆಯೂ ಬಹುವಾಗಿ ಕಾಡುತ್ತಿದೆ. ಇದೀಗ ಕಳೆದ ತಿಂಗಳಿನಿಂದ ಉಕ್ಕು ಹಾಗೂ ಸಿಮೆಟ್ ಬೆಲೆ ಅನಿರೀಕ್ಷಿತವಾಗಿ ಏರಿದ್ದು, ಇದರಿಂದ ಕಟ್ಟಡ ನಿರ್ಮಾಣಗಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದು ಕ್ರೈಡೈನ ಉಡುಪಿ ಜಿಲ್ಲಾ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಹೇಳಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಹೆಚ್ಚಳ ದೊಂದಿಗೆ, ಜಿಎಸ್‌ಟಿ ಏರಿಕೆಯಾಗಿದ್ದು ಇದನ್ನು ತಕ್ಷಣವೇ ಇಳಿಸಬೇಕು. ಸಿಮೆಂಟ್‌ಗೆ ಶೇ.೨೮ರಷ್ಟು ಜಿಎಸ್‌ಟಿ ವಿಧಿಸಲಾಗುತಿದ್ದು, ಇದನ್ನು ಶೇ.೧೨ಕ್ಕೆ ಇಳಿಸಬೇಕು. ಅದೇ ರೀತಿ ಉಕ್ಕಿನ ದರವನ್ನು ಇಳಿಸಬೇಕು ಎಂದವರು ಒತ್ತಾಯಿಸಿದರು.
ಒಪ್ಪಂದದ ಮೊತ್ತದ ಮೇಲೆ ಸರಕಾರ ಶೇ.೬.೭ರಷ್ಟು ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿಯನ್ನು ವಿಧಿಸುತ್ತಿದೆ. ಮನೆ ಖರೀದಿದಾರರಿಗೆ ಸಹಾಯ ಮಾಡಲು ನಾವು ಇದನ್ನು ಶೇ.೩ಕ್ಕೆ ಇಳಿಸುವಂತೆ ಸರಕಾರವನ್ನು ಒತ್ತಾಯಿಸುತಿದ್ದೇವೆ ಎಂದು ಡಯಾಸ್ ಹೇಳಿದರು.
ಸರಕಾರದ ಬದಲಾಗುತ್ತಿರುವ ನೀತಿಗಳಿಂದ ಬಿಲ್ಡರ್‌ಗಳು ಅನೇಕ ರೀತಿಯ ಕಾನೂನು ತೊಡಕುಗಳನ್ನು ಎದುರಿಸುತಿದ್ದಾರೆ. ದಾನಪತ್ರ, ವಿಭಜನ ಪತ್ರಗಳು, ಮಾರಾಟ ಒಪ್ಪಂದಗಳು, ಮಾರಾಟ ಪತ್ರಗಳು ಸೇರಿದಂತೆ ವಿವಿಧ ದಾಖಲೆ ಪತ್ರಗಳನ್ನು ಶೀಘ್ರವಾಗಿ ನೋಂದಣಿ ಮಾಡಿಸಲು ಇದರಿಂದ ತೊಂದರೆಯಾ ಗುತ್ತಿದೆ. ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವ ಬಿಲ್ಡರ್‌ಗಳ ಸಂಕಷ್ಟಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸ ಬೇಕು ಎಂದವರು ಒತ್ತಾಯಿಸಿದರು.
ಉಡುಪಿ ತಾಲೂಕಿಗೆ ಒಂದೇ ಸಬ್ ರಿಜಿಸ್ಟ್ರಾರ್ ಕಚೇರಿ ಇದ್ದು, ಗ್ರಾಹಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಒಂದು ನಗರ ಹಾಗೂ ಒಂದು ಗ್ರಾಮಾಂತರ ಹೀಗೆ ಎರಡು ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯುವಂತೆ ಕ್ರೈಡೈ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆಯಲ್ಲೂ ಸಮಸ್ಯೆ ಯಾಗುತ್ತಿದೆ. ಇಲ್ಲಿ ಕೇವಲ ಮೂವರು ಖಾಯಂ ನೌಕರರು ಮಾತ್ರ ಇದ್ದಾರೆ. ಉಳಿದ ಸಿಬ್ಬಂದಿಗಳು ಗುತ್ತಿಗೆಯಾಧಾರದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಇವರ ಬಗ್ಗೆ ಕಾರ್ಮಿಕ ಇಲಾಖೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಜೆರ್ರಿ ವಿನ್ಸೆಂಟ್ ಡಯಾಸ್, ಕಟ್ಟಡ ಮತ್ತು ಮನೆ ನೋಂದಣಿಗಾಗಿ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ವಿದೇಶಗಳಿಂದ ಬರುವವರು ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕಾಗುತ್ತದೆ. ಇದರಲ್ಲಿ ಟೋಕನ್ ನೀಡುವಲ್ಲಿ ಸಿಬ್ಬಂದಿಗಳು ತಾರತಮ್ಯ ಧೋರಣೆ ಅನುಸರಿಸುತ್ತಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೈಡೈನ ಕಾರ್ಯದರ್ಶಿ ಜೋಯನ್ ಜಾನ್ ಲೆವಿಸ್, ಮನೋಹರ ಶೆಟ್ಟಿ, ಅಮಿತ್ ನಾಯಕ್ ಅಮ್ಮುಂಜೆ ಹಾಗೂ ಗಂಗಾಧರ ರಾವ್ ಉಪಸ್ಥಿತರಿದ್ದರು.