ಮುಲ್ಕಿ : ಯುವಕನ ಕೊಲೆ ಪ್ರಕರಣ; ಆರೋಪಿ ಸೆರೆ

ಎಂ. ಮುರುಗನ್
ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪುನರೂರು ಪೆಟ್ರೋಲ್ ಪಂಪ್ ಎದುರು ಟೂರಿಸ್ಟ್ ಕಾರು ಪಾರ್ಕ್ ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯ ಪ್ರಸ್ತುತ ಬೆಳ್ಳಾಯರು ಗ್ರಾಮ ನಿವಾಸಿ ಎಂ. ಮುರುಗನ್ (36) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೆನ್ನಬೆಟ್ಟು ಗ್ರಾಮದ ಉಲ್ಲಂಜೆ ನಿವಾಸಿ ಹರೀಶ್ ಸಾಲ್ಯಾನ್ (37) ಎಂಬವರನ್ನು ಪುನರೂರು ಪೆಟ್ರೋಲ್ ಪಂಪ್ ಎದುರಿನ ಟೂರಿಸ್ಟ್ ಕಾರು ಪಾರ್ಕ್ ಬಳಿ ಮಾ.19 ರಂದು ರಾತ್ರಿ ಕೊಲೆ ಮಾಡಿದ್ದರು.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಅವರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪ್ರಸ್ತುತ ಬೆಳ್ಳಾಯರು ನಿವಾಸಿ ಎಂ ಮುರುಗನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಮುರುಗನ್ ಹಾಗೂ ಮೃತ ಹರೀಶ್ ಸಾಲ್ಯಾನ್ ಮಧ್ಯೆ ಹಣಕಾಸಿನ ಸಂಬಂಧ ಜಗಳವಾಗಿ ಹರೀಶ್ ರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮುಲ್ಕಿ ಪೊಲೀಸ್ ನಿರೀಕ್ಷಕರಾದ ಕುಸುಮಾಧರ ಅವರ ನೇತೃತ್ವದಲ್ಲಿ ಪಿಎಸ್ಸೈ ವಿನಾಯಕ ತೋರಗಲ್, ಪ್ರೋಬೆಷನರಿ ಪಿಎಸ್ಸೈ ಕೃಷ್ಣ, ಎಎಸ್ಸೈ ಉಮೇಶ್, ಚಂದ್ರಶೇಖರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.