ರಶ್ಯಾದೊಂದಿಗಿನ ಎಲ್ಲಾ ವ್ಯಾಪಾರ ಸ್ಥಗಿತಕ್ಕೆ ಯುರೋಪ್ ರಾಷ್ಟ್ರಗಳಿಗೆ ಉಕ್ರೇನ್ ಆಗ್ರಹ

Photo : PTI
ಕೀವ್, ಮಾ.21: ತನ್ನ ದೇಶದ ವಿರುದ್ಧ ಸುಮಾರು 1 ತಿಂಗಳಿಂದ ಸೇನಾ ದಾಳಿ ನಡೆಸುತ್ತಿರುವ ರಶ್ಯಾದ ಮೇಲೆ ಇನ್ನಷ್ಟು ಒತ್ತಡ ವಿಧಿಸುವ ನಿಟ್ಟಿನಲ್ಲಿ ಆ ದೇಶದೊಂದಿಗಿನ ಎಲ್ಲಾ ವ್ಯಾಪಾರವನ್ನೂ ಸ್ಥಗಿತಗೊಳಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಸೋಮವಾರ ಯುರೋಪಿಯನ್ ಮುಖಂಡರನ್ನು ಆಗ್ರಹಿಸಿದ್ದಾರೆ.
ದಯವಿಟ್ಟು ಈ ದೇಶದ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಡಿ. ಆಕ್ರಮಣಕಾರರಿಗೆ (ರಶ್ಯಾ) ವಿದೇಶಿ ವಿನಿಮಯ ಕರೆನ್ಸಿ ದೊರಕದಂತೆ ಕ್ರಮ ಕೈಗೊಳ್ಳಿ. ನಿಮ್ಮ ಬಂದರುಗಳಿಗೆ ಅವರನ್ನು ಪ್ರವೇಶಿಸಲು ಬಿಡಬೇಡಿ. ನಿಮ್ಮ ಸರಕುಗಳನ್ನು ಅವರಿಗೆ ರಫ್ತು ಮಾಡಬೇಡಿ. ಅವರ ಇಂಧನ ಸಂಪನ್ಮೂಲವನ್ನು ತಿರಸ್ಕರಿಸಿ. ಅವರು ಉಕ್ರೇನ್ ಬಿಟ್ಟು ತೊಲಗುವಂತೆ ಒತ್ತಡ ಹಾಕಿ ಎಂದು ವೀಡಿಯೊ ಮೂಲಕ ನೀಡಿದ ಸಂದೇಶದಲ್ಲಿ ಝೆಲೆನ್ಸ್ಕಿ ಕೋರಿದ್ದಾರೆ.
ಇದೇ ವೇಳೆ ಜರ್ಮನಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ನಿಮ್ಮಲ್ಲಿ ಶಕ್ತಿಯಿದೆ. ಯುರೋಪ್ ಕೂಡಾ ಸಶಕ್ತವಾಗಿದೆ. ಒತ್ತಡ ಹೇರಲು ನಿಮ್ಮಿಂದ ಸಾಧ್ಯವಿದೆ ಎಂದರು.
ಬಾಲ್ಟಿಕ್ ದೇಶಗಳ ಸಹಿತ ಯುರೋಪಿಯನ್ ಯೂನಿಯನ್ ನ ಹಲವು ದೇಶಗಳು ರಶ್ಯಾದ ತೈಲ ಮತ್ತು ಅನಿಲ ಆಮದಿನ ಮೇಲೆ ನಿರ್ಬಂಧಕ್ಕೆ ಒತ್ತಾಯಿಸಿರುವಂತೆಯೇ ಈ ಆಗ್ರಹಕ್ಕೆ ಉಕ್ರೇನ್ ಧ್ವನಿಗೂಡಿಸಿದೆ.





