ಮಣಿಪುರ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿರೇನ್ ಸಿಂಗ್

Photo: PTI
ಇಂಫಾಲ: ಮಣಿಪುರ ರಾಜಧಾನಿ ಇಂಫಾಲದಲ್ಲಿ ಎನ್. ಬಿರೇನ್ ಸಿಂಗ್ ಸೋಮವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಎರಡನೇ ಬಾರಿಗೆ ಮಣಿಪುರದ ಮುಖ್ಯಮಂತ್ರಿಯಾಗುತ್ತಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಿದ್ದರು. ಬಿರೇನ್ ಸಿಂಗ್ ಟ್ವಿಟರ್ ಮೂಲಕ ನಡ್ಡಾಗೆ ಕೃತಜ್ಞತೆ ಸಲ್ಲಿಸಿದರು.
‘‘ಬಿಜೆಪಿಯ ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಗೆ ಇಂಫಾಲಕ್ಕೆ ಹಾರ್ದಿಕ ಸ್ವಾಗತ. ನೂತನ ಸರಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಕ್ಕಾಗಿ ಮಣಿಪುರ ಬಿಜೆಪಿಯು ನಿಮಗೆ ಕೃತಜ್ಞವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಣಿಪುರಕ್ಕೆ ಪಕ್ಷದ ಕೇಂದ್ರೀಯ ವೀಕ್ಷಕಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿರೇನ್ ಸಿಂಗ್ರ ಹೆಸರನ್ನು ರವಿವಾರ ಘೋಷಿಸಿದ್ದರು.
‘‘ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಮಣಿಪುರ ಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಎನ್. ಬಿರೇನ್ ಸಿಂಗ್ರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ” ಎಂದು ಅವರು ಹೇಳಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿರೇನ್ ಸಿಂಗ್ ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದರು. 60 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯು 32 ಸ್ಥಾನಗಳನ್ನು ಗೆದ್ದಿದೆ.







