ಕೀವ್ ನಗರದ ಮೇಲೆ ರಶ್ಯ ಗುಂಡಿನ ದಾಳಿ: ಕನಿಷ್ಟ 8 ಮಂದಿ ಮೃತ್ಯು; ಹಲವು ಮನೆಗಳಿಗೆ ಹಾನಿ

ಕೀವ್, ಮಾ.21: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯ ಸೇನೆಯ ದಾಳಿ ಮುಂದುವರಿದಿದ್ದು ಕೀವ್‌ನ ಪೊಡಿಲ್ ಜಿಲ್ಲೆಯ ಹಲವು ಮನೆಗಳು ಹಾಗೂ ಶಾಪಿಂಗ್ ಸೆಂಟರ್‌ಗಳಿಗೆ ಹಾನಿಯಾಗಿದೆ. ಕನಿಷ್ಟ 8 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ನಗರದ ಮೇಯರ್ ವಿತಾಲಿ ಕಿಶ್ಕೊ ಹೇಳಿದ್ದಾರೆ.
ಮನೆ ಹಾಗೂ ಶಾಪಿಂಗ್ ಸೆಂಟರ್‌ಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲು ತಕ್ಷಣ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ರವಾನಿಸಲಾಗಿದ್ದು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಕನಿಷ್ಟ 8 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ಹೇಳಿದ್ದಾರೆ.
ಅಮೋನಿಯಾ ಸೋರಿಕೆಗೆ ತಡೆ
ರವಿವಾರ ಉಕ್ರೇನ್‌ನ ಸುಮಿ ನಗರದಲ್ಲಿನ ರಾಸಾಯನಿಕ ಸ್ಥಾವರದಲ್ಲಿ ಉಂಟಾಗಿದ್ದ ಸೋರಿಕೆಯನ್ನು ಇದೀಗ ನಿಯಂತ್ರಿಸಲಾಗಿದ್ದು ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುವುದನ್ನು ತಡೆಯಲಾಗಿದೆ ಎಂದು ತುರ್ತು ಕಾರ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಅಮೋನಿಯಾ ಸೋರಿಕೆಯ ಕಾರಣವನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಉಕ್ರೇನ್‌ನ ಪೂರ್ವವಲಯದಲ್ಲಿರುವ ಸುಮಿಖಿಂಪ್ರಾಮ್ ಅಮೋನಿಯಾ ಸ್ಥಾವರದಲ್ಲಿ ಉಂಟಾಗಿದ್ದ ಅಮೋನಿಯಾ ಸೋರಿಕೆ ಸುಮಾರು 2.5 ಕಿಮೀ ವ್ಯಾಪ್ತಿಗೆ ಹರಡಿಕೊಂಡು ತೀವ್ರ ಅಪಾಯದ ಸೂಚನೆ ನೀಡಿತ್ತು. ಸುಮಾರು 2,63,000 ಜನಸಂಖ್ಯೆ ಇರುವ ಈ ನಗರ ಇತ್ತೀಚಿನ ದಿನಗಳಲ್ಲಿ ರಶ್ಯನ್ ಸೇನೆಯ ನಿರಂತರ ಫಿರಂಗಿ ಮತ್ತು ಗುಂಡಿನ ದಾಳಿಗೆ ಒಳಗಾಗುತ್ತಿದೆ.







