ಮಹಾಕಾವ್ಯಗಳ ಒಳಗಿನ ಉತ್ತಮ ಅಂಶಗಳನ್ನು ಓದಿ ಅರ್ಥ ಮಾಡಿಕೊಳ್ಳಲಿ
ಮಾನ್ಯರೇ,
ರಾಷ್ಟ್ರಧ್ವಜ, ಹಿಜಾಬ್ ಮತ್ತು ಕಾಶ್ಮೀರಿ ಫೈಲ್ಸ್ ನಂತರದಲ್ಲಿ ಚುನಾವಣಾ ವರ್ಷದಲ್ಲಿ ಕೋಮುಗಲಭೆ ಹಬ್ಬಿಸುವ ಭಾಗವಾಗಿ ಇದೀಗ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕೆಂದು ಬಿಜೆಪಿಗರು ಗದ್ದಲ ಶುರು ಮಾಡಿದ್ದಾರೆ.
ನಾನು ನೋಡುತ್ತಿರುವಂತೆ ಈಗಾಗಲೇ ರಾಮಾಯಣ ಮತ್ತು ಮಹಾಭಾರತದ ಕಥೆ ಮತ್ತದರ ತಿಳುವಳಿಕೆಯು ಭಾರತದ ಗ್ರಾಮೀಣ ಜೀವನದ ತನಕವೂ ತಲುಪಿದ್ದು ಅವು ಗಾದೆಯ ಮಾತುಗಳ ರೂಪದಲ್ಲೂ ಇವೆ.
ಶಾಲೆಯ ಪಠ್ಯದಲ್ಲಿ ಈ ಹಿಂದೆ ರಾಮನ ಕಥೆ, ಭೀಮನ ಕಥೆ, ಕರ್ಣನ ಕಥೆ, ಕೃಷ್ಣನ ಕಥೆಯ ಆದಿಯಾಗಿ ಬಹುತೇಕ ಕಥನಗಳನ್ನು ಅಳವಡಿಸಲಾಗಿದ್ದು ಅದನ್ನು ಮಕ್ಕಳು ಕೂಡಾ ಓದುತ್ತಲೇ ಬಂದಿದ್ದಾರೆ. ಈಗಲೂ ಮನೆಗಳಲ್ಲಿ ಇದರ ಕಥೆಗಳನ್ನು ಹೇಳಲಾಗುತ್ತದೆ.
ಹೀಗಿರುವಾಗ ಭಗವದ್ಗೀತೆಯನ್ನೂ ವಿವಾದಿತ ವಸ್ತುವಾಗಿಸಿಕೊಂಡು ಚುನಾವಣಾ ಸಂದರ್ಭದ ಧರ್ಮಾಧಾರಿತ ರಾಜಕೀಯ ಮಾಡಲು ಹೊರಟಿರುವುದು ಸರಿಯಲ್ಲ. ಭಗವದ್ಗೀತೆಯನ್ನು ಸರಿಯಾಗಿ ಓದಿಕೊಂಡರೆ ಅವರು ಮಾಡುತ್ತಿರುವ ಈ ಕೆಲಸ ತಪ್ಪುಎಂದು ಅವರಿಗೇ ತಿಳಿಯುತ್ತದೆ
ಪುರಾಣದ ಕಥೆಗಳು ನೈತಿಕ ಮಾರ್ಗವನ್ನು, ಮಾನವೀಯತೆಯ ಮಾರ್ಗವನ್ನು ಬೋಧಿಸುತ್ತವೆ. ಆದರೆ ಬಿಜೆಪಿಗರ ಕೆಟ್ಟ ನಡೆ ನುಡಿ ಮತ್ತು ಸಮಾಜವನ್ನು ಒಡೆಯುವ ಅವರ ರೀತಿ ನೀತಿಗಳನ್ನು ಗಮನಿಸಿದರೆ ಇವರ್ಯಾರೂ ಈ ಪುರಾಣದ ಗ್ರಂಥಗಳನ್ನು ಓದಿಲ್ಲ ಮತ್ತು ಅದರ ತಿಳುವಳಿಕೆಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ನನಗೆ ಅನಿಸುತ್ತದೆ.
ಹಾಗೆ ಅರ್ಥ ಮಾಡಿಕೊಂಡು ಧರ್ಮದ ಮಾರ್ಗದಲ್ಲೇ ಇವರು ಇದ್ದಿದ್ದರೆ, ಇವರು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದರು.
ಭ್ರಷ್ಟತೆ, ಮಾನಸಿಕ ವಿಷ ಮತ್ತು ಮೌಢ್ಯತೆಯನ್ನೇ ಉಸಿರಾಡುತ್ತಿರುವ ಇವರಿಗೆ ಭಗವದ್ಗೀತೆ, ಕುರ್‌ಆನ್, ಬೈಬಲ್ ಎಂದಿಗೂ ಅರ್ಥವಾಗದ ವಿಷಯಗಳು.
ಇದೆಲ್ಲವೂ ಒಂದೆಡೆಯಾದರೆ ಈ ದಿನ ನಮ್ಮ ಯುವಕರು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವ ಪುರಾಣದ ಕಥೆಗಳೊಂದಿಗೆ ಈ ದೇಶದ ಸಂವಿಧಾನವನ್ನು ತಪ್ಪದೇ ಓದಬೇಕು. ದೇಶದ ಎಲ್ಲ ಜನರ ಬದುಕನ್ನು ಕಟ್ಟಿಕೊಳ್ಳಲು ರೂಪುಗೊಂಡ ಸಂವಿಧಾನದ ಆಶಯವೇನು? ಅದರಲ್ಲಿ ಯಾವೆಲ್ಲಾ ಅಂಶಗಳನ್ನು ಬಾಬಾ ಸಾಹೇಬರು ಅಳವಡಿಸಿದ್ದಾರೆ ಎಂದು ತಿಳಿಯಬೇಕು. ಆಗ ಮಾತ್ರವೇ ದೇಶದ ಅಂತರ್ಯವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಯುವ ಜನತೆಗೆ ಬರುತ್ತದೆ.
ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಸಂವಿಧಾನ ರಚನಾ ಸಭೆಯ ಚರ್ಚೆಗಳು ಏನಾಗಿತ್ತು ಎಂಬುದರ ಬಗ್ಗೆ, ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳ ಬಗ್ಗೆ ಮತ್ತು ಭಾಷೆಯ ಉಳಿವಿನ ಕುರಿತ ಅಪಾಯಗಳ ಬಗ್ಗೆ, ಕೆಳವರ್ಗದವರ ಅಧ್ಯಯನ ಬಗ್ಗೆ ಕುವೆಂಪು ಭಾಷಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಾಹಿತ್ಯ ಅಕಾಡಮಿಯ ವತಿಯಿಂದ ಬಹಳಷ್ಟು ಸಂಪುಟಗಳನ್ನೇ ಹೊರ ತರುವ ಕೆಲಸ ಮಾಡಿದೆ.
ದಯಮಾಡಿ ಈ ಸಂಪುಟಗಳನ್ನು ಎಲ್ಲಾ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಓದಬೇಕು ಎಂದು ನಾನು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ.
ಕಾರಣ ಹಿಂದೂಗಳಿಗೆ ಭಗವದ್ಗೀತೆ ಇದೆ, ಮುಸ್ಲಿಮರಿಗೆ ಕುರ್‌ಆನ್ ಇದೆ, ಕ್ರೈಸ್ತರಿಗೆ ಬೈಬಲ್ ಇದೆ. ಆದರೆ ಭಾರತೀಯರೆಲ್ಲರ ರಕ್ಷಣೆಗೆ ಬಾಬಾ ಸಾಹೇಬರು ರಚಿಸಿಕೊಟ್ಟ ಸಂವಿಧಾನವಿದೆ. ಹೀಗಾಗಿ ಸಂವಿಧಾನವನ್ನು ಮೊದಲ ಪ್ರಾಶಸ್ತ್ಯವಾಗಿ ಇಟ್ಟುಕೊಂಡು ನಾವೆಲ್ಲರೂ ಓದಬೇಕು. ಮುಂದಿನ ದಿನಗಳಲ್ಲಿ ಸಂವಿಧಾನದ ಪುಸ್ತಕವನ್ನು ಎಲ್ಲ ಮನೆಗಳಿಗೂ ತಲುಪಿಸಬೇಕೆಂಬ ಮಹದಾಸೆಯೂ ನನಗಿದೆ.
ಒಟ್ಟಿನಲ್ಲಿ ಧಾರ್ಮಿಕ ತಿಳುವಳಿಕೆಗಿಂತ ಸಂವಿಧಾನದ ತಿಳುವಳಿಕೆಯು ಎಲ್ಲ ಜನರನ್ನೂ ಸಾಮರಸ್ಯದ ಕಡೆಗೆ ಕೊಂಡೊಯ್ಯುತ್ತದೆ ಮತ್ತು ಅದು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತದೆ, ಹೀಗಾಗಿ ಸಂವಿಧಾನದ ಓದನ್ನೇ ಮುಖ್ಯವಾಗಿಸಿಕೊಳ್ಳುವ ಕೆಲಸವನ್ನು ಮಾಡೋಣ ಎಂದು ಈ ಮೂಲಕ ವಿನಂತಿಸುತ್ತೇನೆ.
ಇನ್ನು ಜನಪರ ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೂ ಕೆಲ ಹರಕೆಯ ಕುರಿಗಳನ್ನು ಮುಂದೆ ಬಿಟ್ಟು ಧರ್ಮದ ಆಧಾರದ ಮೇಲೆ ಚುನಾವಣಾ ಗಲಭೆ ಎಬ್ಬಿಸಲು ಹೊರಟಿರುವ ಬಿಜೆಪಿಗರು ತಾವು ಮೊದಲು ಮಹಾಕಾವ್ಯಗಳ ಒಳಗಿನ ಉತ್ತಮ ಅಂಶಗಳನ್ನು ಓದಿ ಅರ್ಥ ಮಾಡಿಕೊಳ್ಳಲಿ.!







