ಮಣ್ಣು ಸಂರಕ್ಷಣೆ ಜಾಗೃತಿಗೆ 30 ಸಾವಿರ ಕಿ.ಮೀ. ಬೈಕ್ ಯಾತ್ರೆ ಆರಂಭಿಸಿದ ಸದ್ಗುರು

(ಫೋಟೊ - twitter.com)
ಲಂಡನ್: ಮಣ್ಣು ರಕ್ಷಿಸಿ ಜಾಗೃತಿ ಅಭಿಯಾನದ ಅಂಗವಾಗಿ ಪರಿಸರವಾದಿ ಸದ್ಗುರು ಆರಂಭಿಸಿದ 30 ಸಾವಿರ ಕಿಲೋಮೀಟರ್ ಬೈಕ್ ಯಾತ್ರೆಗೆ ಪಾರ್ಲಿಮೆಂಟ್ ಚೌಕದಲ್ಲಿ ಹಸಿರು ನಿಶಾನೆ ತೋರಿಸಲಾಯಿತು.
ಇಂಗ್ಲೆಂಡಿನಿಂದ ಭಾರತಕ್ಕೆ ಬೈಕ್ ಯಾತ್ರೆ ಕೈಗೊಂಡಿರುವ ಸದ್ಗುರು, ಯೂರೋಪ್ ಹಾಗೂ ಮಧ್ಯಪ್ರಾಚ್ಯದ ಮೂಲಕ ತೆರಳಿ ಮಣ್ಣು ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. 100 ದಿನಗಳ ಈ ಯಾತ್ರೆಯಲ್ಲಿ ಈ ವಾರ ಅಮ್ ಸ್ಟೆರ್ಡಾನ್, ಬರ್ಲಿನ್, ಪರುಗ್ವೆ ದೇಶಗಳನ್ನು ತಲುಪಲಿದ್ದಾರೆ. ಬಿಎಂಡಬ್ಲ್ಯು ಕೆ1600 ಜಿಟಿ ಮೋಟರ್ ಸೈಕಲ್ ನಲ್ಲಿ ಈ ಯಾತ್ರೆ ಆರಂಭಿಸಿದ್ದಾರೆ.
ಮಾರ್ಗಮಧ್ಯದಲ್ಲಿ ಹಲವು ಪ್ರಮುಖ ನಗರಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಭಾರತದ ಸ್ವಾತಂತ್ರ್ಯೋತ್ಸವದ ವರ್ಷಾಚರಣೆ ನೆನಪಿಗಾಗಿ 75ನೇ ದಿನ ಭಾರತಕ್ಕೆ ಆಗಮಿಸುವ ಗುರಿ ಹಾಕಿಕೊಂಡಿದ್ದಾರೆ.
"ನಾವು ಈಗ ಕಾರ್ಯಪ್ರವೃತ್ತರಾಗುವುದು ಮುಖ್ಯ. ಕಳೆದ 24 ವರ್ಷಗಳಿಂದ ನಾನು ಈ ಬಗ್ಗೆ ಮಾತನಾಡುತ್ತಾ ಬಂದಿದ್ದೇನೆ. ಆದರೆ ಪ್ರತಿ ದೇಶಗಳಲ್ಲಿ ಧನಾತ್ಮಕ ನೀತಿಗಳು ಜಾರಿಗೆ ಬಂದಾಗ ಮಾತ್ರ ಇದು ಸಾಧ್ಯ" ಎಂದು ಬೈಕ್ ಯಾತ್ರೆ ಆರಂಭಕ್ಕೆ ಮುನ್ನ ಭಾರತೀಯ ಹೈಕಮಿಷನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
"ಯೂರೋಪ್ನ ಹಲವು ಭಾಗಗಳಲ್ಲಿ ಹಿಮಪಾತವಾಗುತ್ತಿದೆ. ಇಲ್ಲಿ ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೇವೆ. ಈ ವಯಸ್ಸಿನಲ್ಲಿ ಇದು ಖಂಡಿತಾ ಜಾಲಿ ರೈಡ್ ಅಲ್ಲ. ನಾನು ಏಕೆ ಇದನ್ನು ಮಾಡುತ್ತಿದ್ದೇನೆ ? ಏಕೆಂದರೆ 3 ಲಕ್ಷಕ್ಕೂ ಹೆಚ್ಚು ರೈತರು ಕಳೆದ 20 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ; ವಿಶ್ವಾದ್ಯಂತ ಇದು ಸಂಭವಿಸುತ್ತಿದೆ. ಮುಖ್ಯ ಆತಂಕಕಾರಿ ಅಂಶವೆಂದರೆ ಮಣ್ಣಿನ ಸವಕಳಿ" ಎಂದರು.







