ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ
ಪೆಟ್ರೋಲ್, ಡೀಸೆಲ್ ಬೆಲೆಯಲ್ಲೂ ಏರಿಕೆ

ಹೊಸದಿಲ್ಲಿ, ಮಾ.22: 137 ದಿನಗಳ ಬಳಿಕ ಸಾರ್ವಜನಿಕರಂಗದ ತೈಲ ಮಾರಾಟ ಸಂಸ್ಥೆಗಳು ಮಂಗಳವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಲೀಟರ್ಗೆ ತಲಾ 80 ಪೈಸೆ ಏರಿಕೆ ಮಾಡಿವೆ. ಇದರ ಜೊತೆಗೆ ಸಬ್ಸಿಡಿ ರಹಿತ ಅಡುಗೆ ಅನಿಲದ ದರದಲ್ಲಿಯೂ ಸಿಲಿಂಡರ್‌ಗೆ 50 ರೂ. ಹೆಚ್ಚಳವಾಗಿದೆ. ಜಾಗತಿಕ ಕಚ್ಚಾ ತೈಲ ದರದಲ್ಲಿ ಭಾರೀ ಏರಿಕೆಯಾಗಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣವೆಂದು ಅಧಿಕೃತ ಮೂಲಗಳು ತಿಳಿಸಿವೆ.
ನೂತನ ದರಪರಿಷ್ಕರಣೆಯಿಂದಾಗಿ ಪೆಟ್ರೋಲ್ ದರವು ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್‌ಗೆ 96.21 ರೂ. ಮತ್ತು ಇತರ ಮಹಾನಗರಗಳಾದ ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಲೀಟರ್‌ಗೆ 110.81 ರೂ. ಆಗಿದೆ. ಡೀಸೆಲ್ ದರವು ಈಗ ಲೀಟರ್‌ಗೆ ಮುಂಬೈಯಲ್ಲಿ 95 ರೂ. ಚೆನ್ನೈ 92.19 ರೂ. ಹಾಗೂ ಕೋಲ್ಕತಾದಲ್ಲಿ 90.62 ರೂ. ಆಗಿದೆ.
ಈ ಮಧ್ಯೆ ಸಬ್ಸಿಡಿ ರಹಿತ ಅಡುಗೆ ಅನಿಲದ ಸಿಲಿಂಡರ್ಗಳೂ ಕೂಡಾ ಈಗ ತುಟ್ಟಿಯಾಗಿದೆ. ದಿಲ್ಲಿಯಲ್ಲಿ ಈಗ 14.2 ಕೆ.ಜಿ. ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ 949.50 ರೂ.ಗೆ ತಲುಪಿದೆ., 5 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬೆಲೆ 349 ಆಗಿದ್ದರೆ, 10 ಕೆ.ಜಿ. ಎಲ್ಪಿಜಿ ಸಿಲಿಂಡರ್ ದರ 669 ರೂ. ಆಗಿದೆ. ಇದೇ ವೇಳೆ 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ದರವು 2003.50 ರೂ.ಗೆ ತಿಳಿಸಿದೆ. ಕಳೆದ ವರ್ಷದ ಅಕ್ಟೋಬರ್‌ನಿಂದೀಚೆಗೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಹೆಚ್ಚಳವಾಗಿರುವುದು ಇದೇ ಮೊದಲ ಬಾರಿ.
ಸಾರ್ವಜನಿಕರಂಗದ ತೈಲ ಸಂಸ್ಥೆಗಳು 2021ರ ನವೆಂಬರ್ 5ರಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಏರಿಕೆಯನ್ನು ಸ್ಥಗಿತಗೊಳಿಸಿತ್ತು. ರಾಜಕೀಯವಾಗಿ ಮಹತ್ವದ್ದಾದ ಉತ್ತರಪ್ರದೇಶ ಹರಾಗೂ ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ತೈಲ ದರ ಪರಿಷ್ಕರಣೆಯನ್ನು ಮುಂದೂಡಲಾಗಿತ್ತು.
ತೈಲ ದರದಲ್ಲಿ ನವೆಂಬರ್ 3,2021ರಂದು ಕೊನೆಯ ಬಾರಿ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ದಿಲ್ಲಿಯಲ್ಲಿ ತೈಲ ದರ 110.04 ರೂ. ಹಾಗೂ 98,42 ರೂ.ಗೆ ತಲುಪಿದ್ದು, ಇದು ಸಾರ್ವಕಾಲಿಕ ದಾಖಲೆ ಬೆಲೆಯೇರಿಕೆಆಗಿತ್ತು. ತೈಲದರ ಏರಿಕೆಯಿಂದಾಗಿ ತತ್ತರಿಸಿದ ಜನಸಾಮಾನ್ಯರಿಗೆ ತುಸು ನಿರಾಳತೆಯುಂಟು ಮಾಡುವ ಕ್ರಮವಾಗಿ ಪೆಟ್ರೋಲ್ ಹಾಗೂಸ ಡೀಸೆಲ್ ಮೇಲಿನ ಅಬಕಾರಿ ಸುಂಕದ ದರವನ್ನು ಪ್ರತಿ ಲೀಟರ್‌ಗೆ 5 ರೂ. ಹಾಗೂ 10 ರೂ.ಗೆ ಇಳಿಸಲಾಗಿತ್ತು. ತರುವಾಯ ರಾಜ್ಯ ಸರಕಾರಗಳು ಕೂಡಾ ಪೆಟ್ರೋಲ್ ಮತ್ತು ಡೀಸೆಲ ಮೇಲಿನ ವ್ಯಾಟ್ತೆರಿಗೆಯಲ್ಲಿ ಕಡಿತವುಂಟು ಮಾಡಿದವು.
ಭಾರತವು ಪ್ರತಿ ಬ್ಯಾರೆಲ್ಗೆ 75.89 ರೂ. ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿದ್ದು, ವಿದೇಶಿ ವಿನಿಮಯ ದರದಲ್ಲಿ ಅದು 108.25 ರೂ. ಆಗಿದೆ. ರಶ್ಯ- ಉಕ್ರೇನ್ ಯುದ್ಧದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ.







