ಬಯಾಥ್ಲಾನ್‌ನಲ್ಲಿ ಎರಡು ಬೆಳ್ಳಿ ಪದಕ ಪಡೆದ ಕನ್ನಡತಿಗೆ ಸಚಿವ ಡಾ. ನಾರಾಯಣಗೌಡರಿಂದ ಅಭಿನಂದನೆ

ಬೆಂಗಳೂರು : ಬಯಾಥ್ಲಾನ್ ಚಾಂಪಿಯನ್ ಶಿಪ್ ನಲ್ಲಿ ಎರಡು ಬೆಳ್ಳಿ ಪದಕ ಪಡೆದ ಕನ್ನಡದ ಭವಾನಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಜಮ್ಮುಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆದ ರಾಷ್ಟ್ರೀಯ ವಿಂಟರ್ ಬಯಾಥ್ಲಾನ್ ಚಾಂಪಿಯನ್‌ಶಿಪ್-2022ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕೊಡಗಿನ ತೆಕ್ಕಡ ನಂಜುಂಡ ಅವರು 5 ಕಿಲೋಮೀಟರ್ ಮತ್ತು 10 ಕಿಲೋಮೀಟರ್ ರೇಸ್‌ನಲ್ಲಿ ಎರಡು ಬೆಳ್ಳಿ ಪದಕ ಪಡೆದಿದ್ದಾರೆ.
ಭವಾನಿಯವರ ಪ್ರತಿಭೆಯನ್ನ ಗುರುತಿಸಿದ್ದ ರಾಜ್ಯ ಸರ್ಕಾರ, ಇವರಿಗೆ ಉತ್ತಮ ಸಾಧನೆ ಮಾಡಲು ಸಹಾಯವಾಗಲಿ ಎಂದು ಎರಡು ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗಿತ್ತು.
ಭವಾನಿ ಅವರ ಸಾಧನೆ ಇಡೀ ದಕ್ಷಿಣ ಭಾರತಕ್ಕೆ ಹೆಮ್ಮೆ ತರುವಂತಹ ವಿಷಯ. ಮಂಜುಗಡ್ಡೆಯೇ ಇಲ್ಲದ ನಾಡಿನ ಯುವತಿ ಮಂಜುಗಡ್ಡೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿರುವುದು ಸಾಧನೆ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸ್ಪರ್ಧಿಯೊಬ್ಬರು ವಿಂಟರ್ ಬಯಾಥ್ಲಾನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪದಕ ಪಡೆದಿರುವುದು ಐತಿಹಾಸಿಕ ದಾಖಲೆಯಾಗಿದ್ದು, ಭವಾನಿಯವರು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ.







