ಪಶ್ಚಿಮ ಬಂಗಾಳ: ರಾಜಕೀಯ ನಾಯಕನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮನೆಗಳಿಗೆ ಬೆಂಕಿ ಹಚ್ಚಿ 8 ಮಂದಿಯ ಹತ್ಯೆ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನಾಯಕ ಬಹದೂರ್ ಶೇಖ್ ಅವರ ಹತ್ಯೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಶ್ಚಿಮಬಂಗಾಳದ ಬಿರ್ಭೂಮ್ ಜಿಲ್ಲೆಯ ಕೆಲವು ಮನೆಗಳಿಗೆ ಉದ್ರಿಕ್ತ ಗುಂಪುಗಳು ಬೆಂಕಿ ಹಚ್ಚಲಾಗಿದೆ. ಈ ಘಟನೆಯಲ್ಲಿ ಇಂದು ಬೆಳಗ್ಗ ಕನಿಷ್ಠ ಎಂಟು ಮಂದಿಯ ಸುಟ್ಟುಕರಕಲಾದ ಶವಗಳು ಪತ್ತೆಯಾಗಿದ್ದವು. ಘಟನೆಗೆ ಸಂಬಂಧಿಸಿ ಈವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮಬಂಗಾಳದ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವೀಯ ತಿಳಿಸಿದ್ದಾರೆ.
ತೃಣಮೂಲ ನಾಯಕ ಬಹಾದೂರ್ ಶೇಖ್ ಅವರ ಮೃತದೇಹವು ಸೋಮವಾರ ಬೆಳಗ್ಗೆ ಕೊಲೆಯಾದ ಸ್ತಿತಿಯಲ್ಲಿ ಪತ್ತೆಯಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಬಿರ್ಭೂಮ್ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸರಣಿ ಟ್ವೀಟ್ ಮಾಡಿದ್ದು, ಆ ಪ್ರದೇಶದಲ್ಲಿ ಭಯೋತ್ಪಾದನೆ ಹಾಗೂ ಉದ್ವಿಗ್ನತೆಗೆ ಅಂತ್ಯಹಾಡಬೇಕೆಂದು ಹೇಳಿದ್ದಾರೆ.
ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ರಾಮ್ ಪುರ ಹಾತ್ ಗೆ ಸಚಿವ ಫಿರ್ಹಾದ್ ಹಕೀಂ ನೇತೃತ್ವದ ದ್ವಿಸದಸ್ಯ ಟಿಎಂಸಿ ನಿಯೋಗವು ಮಂಗಳವಾರ ಭೇಟಿ ನೀಡಿದೆ. ಘಟನೆಗೆ ಸಂಬಂಧಿಸಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಓ) ಹಾಗೂ ವೃತ್ತ ನಿರೀಕ್ಷಕ (ಐಸಿ)ರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರೂಪಿಸಲಾಗಿದೆಯೆಂದು ಡಿಜಿಪಿ ತಿಳಿಸಿದರು.
ಪಶ್ಚಿಮಬಂಗಾಳ ವಿಧಾನಸಭೆ‘: ಬಿಜೆಪಿ ಸಭಾತ್ಯಾಗ
ಭಿರ್ಭೂಮ್ ಹಿಂಸಾಚಾರಕ್ಕೆ ಕುರಿತಂತೆ ಸದನದಲ್ಲಿ ಹೇಳಿಕೆ ನೀಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿಕೆ ನೀಡಬೇಕೊಂದು ಆಗ್ರಹಿಸಿ ಮಂಗಳವಾರ 22 ಮಂದಿ ಬಿದೆಪಿ ಶಾಸಕರು ಸಭಾತ್ಯಾಗ ಮಾಡಿದ್ದರು. ಈ ವಿಷಯವಾಗಿ ಬಿಜೆಪಿ ಶಾಸಕ ಶಂಕರ್ಘೋಷ್ ಅವರು ಸದನದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿದ್ದಾ, ಅದಕ್ಕೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವಕಾಶ ನೀಡಲಿಲ್ಲ. ಈ ವಿಷಯವನ್ನು ಪ್ರಶ್ನೋತ್ತರ ಕಲಾಪಕ್ಕೆ ಪಟ್ಟಿ ಮಾಡಲಾಗಿಲ್ಲವೆಂದು ಅವರು ತಿಳಿಸಿದ್ದಾರೆ. ಆಗ ಅದನ್ನು ವಿರೋಧಿಸಿ 40 ಮಂದಿ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗಮಾಡಿದರು.







