ಮಂಗಳೂರು: ಇಖ್ರಾ ಅರೇಬಿಕ್ ಶಾಲೆಗೆ ಭೇಟಿ ನೀಡಿದ ಖ್ಯಾತ ಇಸ್ಲಾಮಿಕ್ ಸಂಶೋಧನಾ ವಿದ್ವಾಂಸ ಡಾ. ಅಕ್ರಂ ನದ್ವಿ

ಮಂಗಳೂರು: ಖ್ಯಾತ ಅಂತಾರಾಷ್ಟ್ರೀಯ ಇಸ್ಲಾಮಿಕ್ ಸಂಶೋಧನಾ ವಿದ್ವಾಂಸ ಡಾ.ಅಕ್ರಂ ನದ್ವಿ ಅವರು ಮಂಗಳವಾರ ಇಲ್ಲಿನ ಇಖ್ರಾ ಅರೇಬಿಕ್ ಶಾಲೆಗೆ ಭೇಟಿ ನೀಡಿದರು. ಪ್ರತಿಷ್ಠಿತ ಅಲ್ಲಾಮಾ ಇಕ್ಬಾಲ್ ಪ್ರಶಸ್ತಿ ಪುರಸ್ಕೃತ ಡಾ.ಅಕ್ರಂ ನದ್ವಿಯವರು ಕೇಂಬ್ರಿಡ್ಜ್ ಇಸ್ಲಾಮಿಕ್ ಕಾಲೇಜಿನ ಡೀನ್ ಆಗಿದ್ದು, ಅಲ್-ಸಲಾಮ್ ಇನ್‌ಸ್ಟಿಟ್ಯೂಟ್‌ನ ಪ್ರಾಂಶುಪಾಲರು ಮತ್ತು ಮಾರ್ಕ್‌ಫೀಲ್ಡ್ ಇನ್‌ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‌ನಲ್ಲಿ ಗೌರವ ಸಂದರ್ಶಕ ಫೆಲೋ ಆಗಿದ್ದಾರೆ.
ಅವರು ಇಸ್ಲಾಮಿನ ಪ್ರಮುಖ ಶಾಖೆಗಳಾದ ಹದೀಸ್, ಫಿಖ್ಹ್ (ಇಸ್ಲಾಮಿಕ್ ಕರ್ಮಶಾಸ್ತ್ರ), ಜೀವನಚರಿತ್ರೆ, ಅರೇಬಿಕ್ ವ್ಯಾಕರಣ ಮತ್ತು ವಾಕ್ಯರಚನೆಯ ಕ್ಷೇತ್ರಗಳಲ್ಲಿ ಅರೇಬಿಕ್, ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ 60 ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ವರ್ಷ ಅವರು ಮುಹದ್ದಿಸಾತ್ (ಹದೀಸ್ ಗಳನ್ನು ವರದಿ ಮಾಡಿದ ಮಹಿಳಾ ವಿದ್ವಾಂಸರು) ಕುರಿತಾದ 43 ಸಂಪುಟಗಳ ಜೀವನಚರಿತ್ರೆಯ ನಿಘಂಟನ್ನು ರಚಿಸಿದ್ದರು. ಇದನ್ನು ದಾರುಲ್ ಮಿನ್ಹಾಜ್ ಜಿದ್ದಾ, ಸೌದಿ ಅರೇಬಿಯಾ ಪ್ರಕಟಿಸಿತ್ತು.
ಇಖ್ರಾ ಅರೇಬಿಕ್ ಶಾಲೆಯಲ್ಲಿ ಮಾತನಾಡಿದ ಅವರು, ಇಸ್ಲಾಮಿನಲ್ಲಿನ ತಾರ್ಕಿಕ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಸಭಿಕರು ಹಾಗು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಇಖ್ರಾ ಅರೇಬಿಕ್ ಶಾಲೆಯ ಪ್ರಾಂಶುಪಾಲ ಮೌಲಾನ ಸಾಲಿಂ ನದ್ವಿ, ಮೊಹ್ತಿಶಾಂ ಕಾಂಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಎಸ್.ಎಂ ಅರ್ಷದ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞಿ, ವಕೀಲ ಮಹಮ್ಮದ್ ಅಲಿ, ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಸಾಜಿದ್ ಎ.ಕೆ ಮತ್ತಿತರ ಅತಿಥಿಗಳು ಉಪಸ್ಥಿತರಿದ್ದರು.