ಉತ್ತರಪ್ರದೇಶ: ಲೋಕಸಭಾ ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

ಹೊಸದಿಲ್ಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಲೋಕಸಭಾ ಸಂಸದ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ ಎಂದು NDTV ವರದಿ ಮಾಡಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಸಂಸತ್ತಿನ ಸಂಕೀರ್ಣದಲ್ಲಿ ಭೇಟಿಯಾದ ಯಾದವ್ ತನ್ನ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಅಖಿಲೇಶ್ ಆಝಂಗಢ ಸಂಸದೀಯ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದರು.
ಎಸ್ಪಿ ಸುಪ್ರೀಮೊ ಅಖಿಲೇಶ್ ಯಾದವ್ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ. ಯಾದವ್ ಅವರು ಮೈನ್ಪುರಿ ಜಿಲ್ಲೆಯಲ್ಲಿರುವ ಕರ್ಹಾಲ್ ಕ್ಷೇತ್ರವನ್ನು ಇತ್ತೀಚೆಗೆ ಕೊನೆಗೊಂಡಿರುವ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಯಾದವ್ ಕರ್ಹಾಲ್ ಕ್ಷೇತ್ರವನ್ನು 67,504 ಮತಗಳ ಅಂತರದಿಂದ ಗೆದ್ದುಕೊಂಡಿದ್ದರು. ಯಾದವ್ 1,48,196 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ಎಸ್. ಪಿ. ಸಿಂಗ್ ಬಘೇಲ್ 80,692 ಮತಗಳನ್ನು ಪಡೆದಿದ್ದರು.
Next Story





