ದೂರು ನೀಡಿದರೆ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕ್ರಮ: ಪೊಲೀಸ್ ಕಮಿಷನರ್ ಶಶಿಕುಮಾರ್
ಜಾತ್ರೋತ್ಸವಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧದ ಬ್ಯಾನರ್ ಅಳವಡಿಕೆ

ಶಶಿಕುಮಾರ್
ಮಂಗಳೂರು : ಜಾತ್ರೋತ್ಸವಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧದ ಬ್ಯಾನರ್ ಅಳವಡಿಕೆಯ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಕ್ರಮ ಜರಗಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೆ ದೇವಸ್ಥಾನಗಳ ಆಡಳಿತ ಮಂಡಳಿ ಮತ್ತು ತಹಶೀಲ್ದಾರರ ಜೊತೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ. ದೂರು ನೀಡಿದರೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಹಿಜಾಬ್ಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ತೀರ್ಪಿನ ಬಳಿಕ ಕಳೆದ ಗುರುವಾರ ರಾಜ್ಯಾದ್ಯಂತ ಮುಸ್ಲಿಮರು ಬಂದ್ ನಡೆಸಿದ್ದರು. ಅದನ್ನೇ ನೆಪವಾಗಿಟ್ಟುಕೊಂಡು ದ.ಕ.ಜಿಲ್ಲೆಯ ದೇವಸ್ಥಾನಗಳ ಜಾತ್ರೋತ್ಸವಗಳಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಕೆಲವು ಜಾತ್ರೋತ್ಸವಗಳಲ್ಲಿ ಹಿಂದೂ ಧರ್ಮೀಯರನ್ನು ಹೊರತುಪಡಿಸಿ ಇತರರಿಗೆ ವ್ಯಾಪಾರ ನಡೆಸಲು ಅವಕಾಶ ಇಲ್ಲ ಎಂದು ಬಹಿರಂಗವಾಗಿ ಬ್ಯಾನರ್ ಅಳವಡಿಸಲಾಗಿದೆ. ನಗರದ ಮಂಗಳಾದೇವಿ ದೇವಸ್ಥಾನ, ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರ ನಡೆಸಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ಇದೀಗ ಮಂಗಳಾದೇವಿ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತಿದೆ. ಮುಲ್ಕಿ ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಿಲ್ಲ. ಎ. 10ರಿಂದ 20ರವರೆಗೆ ನಡೆಯುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲೂ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಜಾತ್ರಾ ಗದ್ದೆ ಏಲಂ ಪ್ರಕಟನೆಯಲ್ಲೇ ಸೂಚನೆ ನೀಡಲಾಗಿದೆ. ಈ ಮೂರು ದೇವಸ್ಥಾನ ಕೂಡ ಮುಜರಾಯಿ ಇಲಾಖೆ ಆಡಳಿತಕ್ಕೆ ಒಳಪಟ್ಟಿದೆ.