ಕಾಫಿ ಬೆಳೆಗಾರರಿಗೂ 10 ಎಚ್‍ಪಿವರೆಗೆ ವಿದ್ಯುತ್ ಸಬ್ಸಿಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 22: ‘ಕೃಷಿ ಪಂಪ್‍ಸೆಟ್ ಬಳಕೆ ಮಾಡುವ ರೈತರಿಗೆ ನೀಡುವಂತೆ 10 ಎಚ್.ಪಿ.ವರೆಗಿನ ಪಂಪ್‍ಸೆಟ್ ಇರುವ ಕಾಫಿ ಬೆಳೆಗಾರರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ' ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಅಪ್ಪಚ್ಚು ರಂಜನ್, ಜೆಡಿಎಸ್‍ನ ಎ.ಟಿ.ರಾಮಸ್ವಾಮಿ, ಸಿ.ಟಿ.ರವಿ, ಕೆ.ಜಿ.ಬೋಪಯ್ಯ, ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, ‘ಕಾಫಿ ಬೆಳೆಗಾರರ ಸಮಸ್ಯೆಗೆ ಸಂಬಂಧಪಟ್ಟಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರ ಜೊತೆಯಲ್ಲಿಯೂ ಸಮಾಲೋಚನೆ ನಡೆಸಿದ್ದೇನೆ' ಎಂದರು.
‘ಕಾಫಿ ವಾಣಿಜ್ಯ ಬೆಳೆ ಮತ್ತು ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಮನೋಭಾವದ ಕಾರಣಕ್ಕೆ ಅವರನ್ನು ವಿದ್ಯುತ್ ಸಬ್ಸಿಡಿ ವ್ಯಾಪ್ತಿಗೆ ಸೇರಿಸಿರಲಿಲ್ಲ. ವಿದ್ಯುತ್ ಸಬ್ಸಿಡಿ ನೀಡಲು ಸರಕಾರ ವಾರ್ಷಿಕ 12 ಸಾವಿರ ಕೋಟಿ ರೂ.ಗಳಿಂದ 14 ಸಾವಿರ ಕೋಟಿ ರೂ.ಗಳಷ್ಟು ಮೊತ್ತವನ್ನು ಒದಗಿಸಬೇಕಿದೆ. ಕಾಫಿ ಬೆಳೆಗಾರರಿಗೆ 10 ಎಚ್‍ಪಿ ವರೆಗೆ ವಿದ್ಯುತ್ ಸಬ್ಸಿಡಿ ನೀಡಲು ಸಮಸ್ಯೆ ಇಲ್ಲ. ಆದರೆ, ಇದರ ದುರ್ಬಳಕೆ ತಡೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಲಾಗುವುದು' ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಅಪ್ಪಚ್ಚು ರಂಜನ್, ಎ.ಟಿ.ರಾಮಸ್ವಾಮಿ ಸೇರಿ ಇನ್ನಿತರರು, ‘ಅಡಿಕೆ, ‘ತಂಬಾಕು ಬೆಳೆಗಾರರ ಪಂಪ್‍ಸೆಟ್‍ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಆದರೆ, ಕಾಫಿ ಬೆಳೆಗಾರರಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ. ವಾಣಿಜ್ಯ ದರ ವಿಧಿಸುವುದು ಸಲ್ಲ. ಕೊಡಗಿನ ಕಾಫಿ ಬೆಳೆಗಾರರು ಕಾವೇರಿ ನದಿಗೆ 350 ಟಿಎಂಸಿಯಷ್ಟು ನೀರನ್ನು ಕೊಡುತ್ತಾರೆ. ಹೀಗಾಗಿ ಅವರಿಗೆ 10 ಎಚ್‍ಪಿ ವರೆಗಿನಅವರ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಬ್ಸಿಡಿಯನ್ನು ನೀಡಬೇಕು' ಎಂದು ಆಗ್ರಹಿಸಿದರು.







