ವಿಜಯಪುರದ ಉಕ್ಕಲಿ ಗ್ರಾಮದಲ್ಲಿ ಲಘು ಭೂಕಂಪ: ಮನೆ ಬಿಟ್ಟು ಹೊರಗೆ ಓಡಿ ಬಂದ ಜನ

ಸಾಂದರ್ಭಿಕ ಚಿತ್ರ
ವಿಜಯಪುರ, ಮಾ.22: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಕೇಂದ್ರಿತವಾಗಿ ಮಂಗಳವಾರ ಬೆಳಗ್ಗೆ 11.21ಕ್ಕೆ ಲಘು ಭೂಕಂಪವಾಗಿದೆ. ಇದರಿಂದಾಗಿ, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಖಚಿತಪಡಿಸಿದೆ.
ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪದ ಅನುಭವವಾಗಿದೆ. ಭೂಮಿಯೊಳಗಿಂದ ಭಾರೀ ಶಬ್ದ ಹೊರಹೊಮ್ಮಿತು. ಭೂಕಂಪದಿಂದ ಮನೆ, ಕಟ್ಟಡಗಳಿಗೆ ಯಾವುದೇ ಹಾನಿಯಾಗಿಲ್ಲ.
ಕಳೆದ ಮಳೆಗಾಲದಲ್ಲಿ ಜಿಲ್ಲೆಯ ಹಲವೆಡೆ ಏಳೆಂಟು ಬಾರಿ ಇದೇ ರೀತಿ ಲಘು ಭೂಕಂಪನವಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದ ತಜ್ಞರು, ಮಳೆ ಹೆಚ್ಚಾದಾಗ ಹಾಗೂ ಆಲಮಟ್ಟಿ ಜಲಾಶಯ ಭರ್ತಿಯಾದಾಗ ಈ ರೀತಿಯ ಲಘು ಭೂಕಂಪವಾಗುವುದು ಸಹಜ. ಇದಕ್ಕೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದರು.
Next Story





