ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕಾಪು ಗುಜರಿ ಅಂಗಡಿ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಶಾಸಕರ ಒತ್ತಾಯ

ಬೆಂಗಳೂರು, ಮಾ. 22: ‘ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಲ್ಲಾರು ಗ್ರಾಮದ ಬಳಿಯ ಗುಜರಿ ಅಂಗಡಿಯಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಅವರಿಗೆ ಸರಕಾರ ಕೂಡಲೇ ಪರಿಹಾರ ನೀಡಬೇಕು' ಎಂದು ಆಡಳಿತ ಪಕ್ಷದ ಶಾಸಕ ಲಾಲಾಜಿ ಮೆಂಡನ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಘಟನೆಯಲ್ಲಿ ಇಬ್ಬರು ಅಸುನೀಗಿದ್ದು ನಾಲ್ಕೈದು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆ ಪೈಕಿ ಇಬ್ಬರು ಶೇ.90ರಷ್ಟು ಸುಟ್ಟಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ರಾಜ್ಯ ಸರಕಾರ ಉಚಿತವಾಗಿ ಚಿಕಿತ್ಸೆ ನೀಡಬೇಕು' ಎಂದು ಒತ್ತಾಯಿಸಿದರು.
ಸದಸ್ಯರ ಪ್ರಸ್ತಾಪಕ್ಕೆ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಕಾಪುವಿನ ಗುಜರಿ ಅಂಗಡಿಯಲ್ಲಿ ಅನಧಿಕೃತವಾಗಿ ಗ್ಯಾಸ್ ಕಟರ್ ಬಳಕೆ ಹಿನ್ನೆಲೆಯಲ್ಲಿ ಅನಿಲ ಸ್ಫೋಟದಿಂದ ದುರಂತ ಸಂಭವಿಸಿದೆ. ಇಬ್ಬರು ಅಸುನೀಗಿದ್ದು, ನಾಲ್ಕೈದು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಕೂಡಲೇ ವರದಿ ತರಿಸಿಕೊಂಡು ಪರಿಹಾರ ವಿತರಣೆ, ಗಾಯಾಳುಗಳಿಗೆ ಚಿಕಿತ್ಸೆ ಕಲ್ಪಿಸುವ ಸಂಬಂಧ ಕ್ರಮ ವಹಿಸಲಾಗುವುದು' ಎಂದು ಭರವಸೆ ನೀಡಿದರು.





