ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಸಶಕ್ತಗೊಳಿಸಲು ಪಾಕ್- ಚೀನಾ ಒಪ್ಪಂದ
ಇಸ್ಲಾಮಾಬಾದ್, ಮಾ.22: ಉಭಯ ದೇಶಗಳ ನಡುವಿನ ಕಬ್ಬಿಣದಷ್ಟು ಗಟ್ಟಿಯಾದ ಸ್ನೇಹಸಂಬಂಧವನ್ನು ಇನ್ನಷ್ಟು ಸಶಕ್ತಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವ ಶಾ ಮಹ್ಮೂದ್ ಖುರೇಶಿ ಮತ್ತು ಚೀನಾದ ವಿದೇಶ ಸಚಿವ ವಾಂಗ್ ಯಿ ಪರಸ್ಪರ ಚರ್ಚೆ ನಡೆಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುವ 5 ಒಪ್ಪಂದಗಳಿಗೆ ಉಭಯ ಮುಖಂಡರು ಸಹಿ ಹಾಕಿದ್ದಾರೆ ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವಾಲಯ ಮಂಗಳವಾರ ಹೇಳಿದೆ.
ಖುರೇಶಿ ಮತ್ತು ವಾಂಗ್ ಯಿ ನಡುವೆ ಇಸ್ಲಾಮಾಬಾದಿನಲ್ಲಿ ನಡೆದ ಮಾತುಕತೆಯ ಬಳಿಕ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಐದು ಒಪ್ಪಂದಗಳಲ್ಲಿ ಉನ್ನತ ಶಿಕ್ಷಣ ಮತ್ತು ಪದವಿ ಪ್ರಮಾಣಪತ್ರವನ್ನು ಪರಸ್ಪರ ಗೌರವಿಸಿ ಮಾನ್ಯತೆ ನೀಡುವ ಬಗ್ಗೆ ಚೀನಾದ ಶಿಕ್ಷಣ ಇಲಾಖೆ ಹಾಗೂ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದ ನಡುವಿನ ಒಪ್ಪಂದವೂ ಸೇರಿದೆ. ಇಸ್ಲಾಮಾಬಾದ್ನಲ್ಲಿ ನಡೆಯುತ್ತಿರುವ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ವಿದೇಶ ವ್ಯವಹಾರ ಸಚಿವರ ಅಧಿವೇಶನದಲ್ಲಿ ವಿಶೇಷ ಆಮಂತ್ರಿತರಾಗಿ ಭಾಗವಹಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸದೃಢಗೊಳಿಸುವ, ಸ್ಥಿರಗೊಳಿಸುವ ಉಪಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ದ್ವಿಪಕ್ಷೀಯ ಕಾರ್ಯತಂತ್ರದ ವಿಷಯ, ಆರ್ಥಿಕ ಮತ್ತು ಭದ್ರತೆ ಕ್ಷೇತ್ರದಲ್ಲಿ ಸಹಕಾರ, ಕೋವಿಡ್-19 ಸಾಂಕ್ರಾಮಿಕ, ಉಕ್ರೇನ್ನಲ್ಲಿನ ಪರಿಸ್ಥಿತಿ, ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಇಲಾಖೆ ಹೇಳಿದೆ. ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಉತ್ತೇಜನ ನೀಡುವ ಮತ್ತು ಅಲ್ಲಿ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ನೆಲೆಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ನಡೆಸುತ್ತಿರುವ ಪ್ರಯತ್ನ ಮುಂದುವರಿಯಲಿದೆ ಎಂದು ಪಾಕ್ ವಿದೇಶ ಸಚಿವ ಖುರೇಶಿಯವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.







