ದಲಿತ ದಿನೇಶ್ ನಾಯ್ಕ್ ಕೊಲೆ ಪ್ರಕರಣ; ಪರಿಹಾರ ಧನ ಹೆಚ್ಚಿಸಲು ಪುಷ್ಪಾ ಅಮರನಾಥ್ ಆಗ್ರಹ
ಮಂಗಳೂರು : ಬೆಳ್ತಂಗಡಿ ತಾಲೂಕಿನ ಉಜಿರೆಯ ಕಾಂಗ್ರೆಸ್ ಕಾರ್ಯಕರ್ತ, ದಲಿತ ವ್ಯಕ್ತಿ ದಿನೇಶ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಕ್ಕೆ ಸರಕಾರ 8 ಲಕ್ಷ ರು. ಪರಿಹಾರ ನೀಡಲು ನಿರ್ಧರಿಸಿದೆ. ಇದು ತಾರತಮ್ಯದಿಂದ ಕೂಡಿದ್ದು, ಸರಕಾರ ಆ ಮೊತ್ತವನ್ನು 25 ಲಕ್ಷ ರೂ.ಗೆ ಏರಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಆಗ್ರಹಿಸಿದ್ದಾರೆ.
ದಿನೇಶ್ ನಾಯ್ಕ್‌ರ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಅವರು ಬಳಿಕ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪರಿಹಾರ ಧನ ಏರಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕುಟುಂಬಕ್ಕೆ 25 ಲಕ್ಷ ರೂ.. ಪರಿಹಾರ ಘೋಷಿಸಲಾಗಿದೆ. ಆದರೆ ಉಜಿರೆಯ ದಿನೇಶ್ ಕುಟುಂಬಕ್ಕೆ ತಾರತಮ್ಯ ಮಾಡಿದ್ದಾರೆ. ಸಾವಿನಲ್ಲೂ ತಾರತಮ್ಯವಿದೆಯಾ? ದಲಿತರ ಸಾವು ಸಾವಲ್ವಾ?ಎಂದು ಪ್ರಶ್ನಿಸಿದರಲ್ಲದೆ ಬಿಜೆಪಿ ಸರಕಾರ ದಲಿತ ವಿರೋಧಿ ನಡೆ ತೋರಿಸುತ್ತಿದೆ ಎಂದು ಆರೋಪಿಸಿದರು.
ದಿನೇಶ್‌ರ ಪತ್ನಿ, ತಾಯಿ, ಇಬ್ಬರು ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಬಿಜೆಪಿ ಹಾಗೂ ಆರ್‌ಟಿಐ ಕಾರ್ಯಕರ್ತನಾಗಿದ್ದ ವಿನಾಯಕ ಬಾಳಿಗ ಕೊಲೆ ನಡೆದು 6 ವರ್ಷ ಕಳೆದರೂ ಕೂಡ ಅವರ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎನ್ನುವ ಬಿಜೆಪಿ ಬಾಳಿಗ ಕೊಲೆ ನಡೆದು 6 ವರ್ಷವಾದರೂ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಕೊಡಿಸಿಲ್ಲ? ಈವರೆಗೆ ಯಾವ ಬಿಜೆಪಿ ಮುಖಂಡರೂ ಬಾಳಿಗ ಮನೆಗೆ ಯಾಕೆ ಹೋಗಿಲ್ಲ? ಈ ಪ್ರಕರಣವನ್ನು ಕೂಡಲೇ ಎಸ್‌ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮಂಗಳೂರು ಫೈಲ್ಸ್ ನೋಡಿ: ಬಿಜೆಪಿ ಮುಖಂಡರು ಈಗ ‘ಕಾಶ್ಮೀರ್ ಫೈಲ್ಸ್’ ನೋಡುತ್ತಿದ್ದಾರೆ. ದಿನೇಶ್ ನಾಯ್ಕ್, ವಿನಾಯಕ ಬಾಳಿಗರಂಥ ಕೊಲೆಗಳು ನಡೆದ ‘ಮಂಗಳೂರು ಫೈಲ್ಸ್’ ನೋಡಲಿ. ಮಂಗಳೂರು ಫೈಲ್ಸ್‌ನ್ನು ವೀಕ್ಷಣೆ ಮಾಡಿದರೆ ಕರಾಳ ದರ್ಶನವಾಗಲಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.
ಮಹಿಳೆಯರಿಗೆ ಟಿಕೆಟ್ ಕೇಳ್ತೀವಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಶೇ.40ರಷ್ಟು ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ ನೀಡಿ ಪ್ರಿಯಾಂಕಾ ಗಾಂಧಿ ಆದರ್ಶ ಮೆರೆದಿದ್ದಾರೆ. ರಾಜ್ಯದಲ್ಲೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಮಹಿಳಾ ಮೀಸಲಾತಿ ಕೇಳುತ್ತೇವೆ. ಗೆಲ್ಲುವ ಅವಕಾಶ ಇರುವ ಮಹಿಳೆಯರಿಗೆ ಟಿಕೆಟ್ ಕೊಡಿ ಎಂದು ಕೇಳಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿಯರಾದ ಅಪ್ಪಿ, ಚಂದ್ರಕಲಾ, ಶೈಲಜಾ ಅಮರನಾಥ್, ಚಂದ್ರಿಕಾ ಸುರೇಶ್, ನಮಿತಾ, ಮಂದರಾ, ಶಶಿಕಲಾ, ಮಂಜುಳಾ ನಾಯಕ್, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ್ ಉಪಸ್ಥಿತರಿದ್ದರು.
‘ನಾನು ಹೆಣ್ಣು ಹೋರಾಡಬಲ್ಲೆ’ ವೀಡಿಯೋ ಸ್ಪರ್ಧೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನಿಂದ ಮಹಿಳೆಯರ ಸಾಧನೆಯನ್ನು ಗುರುತಿಸುವ ದೃಷ್ಟಿಯಿಂದ ವೀಡಿಯೊ ಸ್ಪರ್ಧೆ ಆಯೋಜಿಸಲಾಗಿದ್ದು, ಮಹಿಳೆಯರು ತಮ್ಮ ಸಾಧನೆಯ ಹಾದಿಯ ಕುರಿತು 3 ನಿಮಿಷಗಳ ವೀಡಿಯೊ ಮಾಡಿ ಕಳುಹಿಸಬೇಕು. ಮಾ.8ರಂದು ಸ್ಪರ್ಧೆ ಆರಂಭಗೊಂಡಿದ್ದು, ಎ.8ರಂದು ಕೊನೇ ದಿನಾಂಕವಾಗಿದೆ. ಎ.14ರಂದು ರಾಜ್ಯಮಟ್ಟದ ವಿಜೇತರನ್ನು ಘೋಷಿಸಲಾಗುವುದು. ನಂತರ ರಾಷ್ಟ್ರ ಮಟ್ಟದ ಸ್ಪರ್ಧೆಯಿದೆ. 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಪುಷ್ಪಾ ಅಮರನಾಥ್ ಹೇಳಿದರು.