ಉಕ್ರೇನ್ ನಿರಾಶ್ರಿತರಿಗೆ ನೆರವು ಒದಗಿಸಲು ನೊಬೆಲ್ ಪದಕ ದೇಣಿಗೆ ನೀಡಿದ ರಶ್ಯದ ಪತ್ರಕರ್ತ

Photo: Twitter/@NobelPrize
ಮಾಸ್ಕೊ, ಮಾ.22: ನೊಬೆಲ್ ಶಾಂತಿ ಪುರಸ್ಕೃತ ರಶ್ಯದ ಪತ್ರಕರ್ತ ಡಿಮಿಟ್ರಿ ಮುರಟೋವ್ ಉಕ್ರೇನ್ನ ನಿರಾಶ್ರಿತರಿಗಾಗಿನ ನೆರವು ನಿಧಿಗೆ ದೇಣಿಗೆಯಾಗಿ ಪ್ರತಿಷ್ಟಿತ ನೊಬೆಲ್ ಪದಕವನ್ನು ದೇಣಿಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ನೊವಾಯ ಗಝೆಟ ಪತ್ರಿಕೆಯ ಸಂಪಾದಕರಾಗಿರುವ ಡಿಮಿಟ್ರಿ 2021ರ ನೊಬೆಲ್ ಶಾಂತಿ ಪದಕ ಪಡೆದಿದ್ದಾರೆ. ಉಕ್ರೇನ್ ನಿರಾಶ್ರಿತರ ನಿಧಿಗೆ ನನ್ನ ನೊಬೆಲ್ ಪದಕ ದೇಣಿಗೆಯಾಗಿ ನೀಡಲು ನಾನು ಮತ್ತು ನೊವಾಯ ಗಝೆಟ ಪತ್ರಿಕೆ ನಿರ್ಧರಿಸಿದೆ. ಈಗಾಗಲೇ ನಿರಾಶ್ರಿತರ ಸಂಖ್ಯೆ 10 ಮಿಲಿಯನ್ ದಾಟಿದೆ. ಈ ವಿಶ್ವಪ್ರಸಿದ್ಧ, ಪ್ರತಿಷ್ಟಿತ ಪದಕವನ್ನು ಹರಾಜಿಗೆ ಇಡುವಂತೆ ಹರಾಜು ಸಂಸ್ಥೆಗಳನ್ನು ಕೋರಿದ್ದೇನೆ ಎಂದು ಡಿಮಿಟ್ರಿ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಆಕ್ರಮಣವನ್ನು ಖಂಡಿಸುವ ರಶ್ಯದ ಪತ್ರಿಕೆಗಳಲ್ಲಿ ಡಿಮಿಟ್ರಿ ಅವರ ಪತ್ರಿಕೆಯೂ ಸೇರಿದೆ. ಕಳೆದ ವಾರ ಡಿಮಿಟ್ರಿ ಅವರ ಪತ್ರಿಕೆ ರಶ್ಯದಲ್ಲಿ ನಡೆಯುತ್ತಿರುವ ಯುದ್ಧವಿರೋಧಿ ಪ್ರತಿಭಟನೆಯ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಆದರೆ ಪ್ರತಿಭಟನೆಯಲ್ಲಿ ಪ್ರದರ್ಶಿಸಲಾದ ಪೋಸ್ಟರ್ನ ಘೋಷವಾಕ್ಯವನ್ನು ಮಸುಕುಗೊಳಿಸಲಾಗಿತ್ತು. 2021ರ ನೊಬೆಲ್ ಶಾಂತಿ ಪುರಸ್ಕಾರವನ್ನು ಡಿಮಿಟ್ರಿ ಮುರಟೋವ್ ಹಾಗೂ ಫಿಲಿಪ್ಪೀನ್ಸ್ನ ಪತ್ರಕರ್ತೆ ಮರಿಯಾ ರೆಸ್ಸಾಗೆ ಜಂಟಿಯಾಗಿ ನೀಡಲಾಗಿದೆ.







