ಸಂವಿಧಾನ ಬದಲಾವಣೆ ಕುರಿತ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರ: ಸದನದಲ್ಲಿ ಆಡಳಿತ-ವಿರೋಧ ಪಕ್ಷದ ನಡುವೆ ಜಟಾಪಟಿ

ಬೆಂಗಳೂರು, ಮಾ.22: 12ನೇ ಶತಮಾನದಲ್ಲಿ ಬಸವಣ್ಣ, ವರ್ಣ, ಜಾತಿ, ವರ್ಗರಹಿತ ಸಮಾಜ ನಿರ್ಮಾಣ ಮಾಡಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಅದೇ ರೀತಿ ಅಂಬೇಡ್ಕರ್ ಈ ಭೂಮಿಯ ಮೇಲೆ ಹುಟ್ಟದೇ ಇದ್ದಿದ್ದರೆ, ನಾನು ಎರಡು ಬಾರಿ ಶಾಸಕನಾಗಿ ಇಲ್ಲಿಗೆ ಬರುತ್ತಿರಲಿಲ್ಲ. ನಮಗೆ ಸಮಾಜದಲ್ಲಿ ಸ್ವಾಭಿಮಾನದ ಬದುಕು ನೀಡಿದ್ದು, ಅಂಬೇಡ್ಕರ್. ಅವರು ಜೀವಂತ ಇದ್ದಾಗ ದಲಿತರ ರಕ್ಷಣೆ ಮಾಡುತ್ತಿದ್ದರು. ಅವರು ಇಲ್ಲದ ಈ ಸಂದರ್ಭದಲ್ಲಿ ಅವರ ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಪ್ರಸಾದ್ ಅಬ್ಬಯ್ಯ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಹ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಹೇಳುವಂತಹ ಸಂಸದರ ಬಗ್ಗೆ ಆಡಳಿತ ಪಕ್ಷದ ಯಾವ ದಲಿತ ನಾಯಕನೂ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎದ್ದುನಿಂತ ಬಿಜೆಪಿ ಸದಸ್ಯ ಪಿ.ರಾಜೀವ್, ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಸಮಾನತೆಯನ್ನು ಸಾರುವ ದೊಡ್ಡ ಗ್ರಂಥ. ಸಂವಿಧಾನದ ವಿರುದ್ಧ ಯಾರೇ ಮಾತನಾಡಿದ್ದರೂ ಅದನ್ನು ಕಠೋರವಾಗಿ ಈ ಸದನ ವಿರೋಧಿಸುತ್ತದೆ. ಯಾರೋ ಒಬ್ಬ ವ್ಯಕ್ತಿ, ಯಾವುದೋ ಒಂದು ಹೇಳಿಕೆ ನೀಡಿದರೆ, ಅದು ಒಂದು ಪಕ್ಷದ ಹೇಳಿಕೆ ಎಂದು ತಪ್ಪಾಗಿ ಭಾವಿಸುವುದು ಬೇಡ ಎಂದರು.
ನಾನು ಈ ಪಕ್ಷದ ಶಾಸಕನಾಗಿ ಹೇಳುತ್ತಿದ್ದೇನೆ, ನಮ್ಮ ಪಕ್ಷದಲ್ಲಿ ಅಂಬೇಡ್ಕರ್ ವಿಚಾರಕ್ಕೆ ಇರುವ ಗೌರವ, ಬಿಜೆಪಿ ಅಧಿಕಾರಕ್ಕೆ ಬಂದು, ಮೋದಿ ದೇಶದ ನಾಯಕತ್ವ ವಹಿಸಿಕೊಂಡ ನಂತರ, ಅಂಬೇಡ್ಕರ್ ವಿಚಾರಧಾರೆಗಳಿಗೆ ಸಿಕ್ಕ ಗೌರವ 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೊಟ್ಟಿಲ್ಲ, ಮುಂದೆಯೂ ಕೊಡುವುದಿಲ್ಲ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್, ನಾವು ಸಂವಿಧಾನ ಬದಲಾವಣೆ ಮಾಡಲು ಬಂದಿರೋದು ಎಂದು ಯಾರೋ ಒಬ್ಬ ವ್ಯಕ್ತಿ ಹೇಳಿದ ಮಾತಲ್ಲ. ನರೇಂದ್ರ ಮೋದಿ ನೇತೃತ್ವದ ಸರಕಾರದ ಸಚಿವ ಸಂಪುಟದ ಸದಸ್ಯ ಹೇಳಿದ್ದು ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ರಾಜೀವ್ ವಿರುದ್ಧ ಕಾಂಗ್ರೆಸ್ ಸದಸ್ಯರು ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ವಾದ ಏರ್ಪಟ್ಟಿತು.
ಈ ನಡುವೆ ಪುನಃ ಮಾತು ಆರಂಭಿಸಿದ ರಾಜೀವ್, ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಕಾಂಗ್ರೆಸ್ ಸದಸ್ಯರು ವ್ಯಾಖ್ಯಾನ ಮಾಡುವುದು ಬೇಡ. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗಟ್ಟಿಯಾಗಿ ಪ್ರತಿನಿಧಿಸುವ ಪಕ್ಷ ಬಿಜೆಪಿ ಎಂದರು. ಇದಕ್ಕೆ ಪುನಃ ತಿರುಗೇಟು ನೀಡಿದ ಖಾದರ್, ರಾಷ್ಟ್ರಧ್ವಜ, ಸಂವಿಧಾನಕ್ಕೆ ಅಗೌರವ ತೋರಿಸಿರುವುದು ಕಾಂಗ್ರೆಸ್‍ನವರಲ್ಲ. ನಾವು ಸಂವಿಧಾನವನ್ನು ಗೌರವಿಸಿ, ಅದರಂತೆ ಆಡಳಿತ ನಡೆಸಿದ್ದೇವೆ ಎಂದರು.
ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜೀವ್ ಹೇಳಿದಂತೆ ಯಾರೋ ಏನೋ ಹೇಳಿದರೆ, ಅದು ಪಕ್ಷದ ನಿಲುವಾಗಲ್ಲ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಒಬ್ಬ ಚುನಾಯಿತ ಪ್ರತಿನಿಧಿ, ಬಿಜೆಪಿ ಸಂಸದ, ಕೇಂದ್ರ ಸರಕಾರದ ಸಚಿವ ಸಂಪುಟದ ಸದಸ್ಯ ಇಂತಹ ಹೇಳಿಕೆ ನೀಡಿದಾಗ ಕನಿಷ್ಠ ಪ್ರಧಾನಿ ಒಂದು ಬಾರಿಯಾದರೂ ಆ ಹೇಳಿಕೆಯನ್ನು ತಪ್ಪು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅದನ್ನು ತಪ್ಪು ಎಂದು ಹೇಳಿದ್ದಾರಾ? ಅವರ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದರು.
65 ವರ್ಷ ಆಡಳಿತ ನಡೆಸಿದವರು ಸಂವಿಧಾನಕ್ಕೆ ಗೌರವ ಕೊಟ್ಟಿಲ್ಲ ಎಂದು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಿದ್ದೇವೆ. ನಾವು ಈ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸದೆ, ಬೆಳೆಸದೆ ಇದ್ದಿದ್ದರೆ ಇವರಾಗಲಿ, ನಾವಾಗಲಿ ಈ ಸದನದಲ್ಲಿ ಬಂದು ಕೂರಲು ಸಾಧ್ಯವಿತ್ತೇ? ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಆಗ ಎದ್ದುನಿಂತ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದಿದ್ದು ನೀವೆ ಅಲ್ಲವೇ ಎಂದರು.
ತಿದ್ದುಪಡಿಗೂ, ಬದಲಾವಣೆಗೂ ವ್ಯತ್ಯಾಸ ಗೊತ್ತಿಲ್ಲವೇ ನಿಮಗೆ, ರಾಜೀವ್ ಅವರೇ ಗೃಹ ಸಚಿವರಿಗೆ ತಿದ್ದುಪಡಿ ಹಾಗೂ ಬದಲಾವಣೆಯ ನಡುವಿನ ವ್ಯತ್ಯಾಸ ತಿಳಿಸಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಂವಿಧಾನವನ್ನು ಯಾವ ರೀತಿ ಬೆಳೆಸಿದ್ದೀರಾ?
ಸಂವಿಧಾನವನ್ನು ಯಾವ ರೀತಿ ಬೆಳೆಸಿದ್ದೀರಾ? ಅದನ್ನು ನನಗೆ ತಿಳಿಸಿ. ಸಂವಿಧಾನದ ರಕ್ಷಣೆ ಗೊತ್ತಿದೆ. ಆದರೆ, ಬೆಳೆಸೋದು ಹೇಗೆ ಎಂದು ಸ್ಪೀಕರ್ ಸ್ಥಾನದಲ್ಲಿ ಆಸೀನರಾಗಿದ್ದ ಉಪಸಭಾಧ್ಯಕ್ಷ ಆನಂದ್ ಮಾಮನಿ, ಪ್ರಿಯಾಂಕ್ ಖರ್ಗೆಯನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸದನದಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ನಾನು ಒಂದೂವರೆ ತಾಸು ಈ ವಿಚಾರದ ಬಗ್ಗೆ ಮಾತನಾಡಿದ್ದೇನೆ. ನಿಮ್ಮ ಬಳಿ ಇಲ್ಲದೆ ಇದ್ದರೆ ನಾನು ಆ ಕಾಪಿ ಕಳುಹಿಸಿಕೊಡುತ್ತೇನೆ ಎಂದರು.







