ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಪ್ರಾಧ್ಯಾಪಕನ ವಿರುದ್ಧದ ನೋಟಿಸ್ ರದ್ದತಿಗೆ ಹೈಕೋರ್ಟ್ ತಡೆ

ಬೆಂಗಳೂರು, ಮಾ.22: ಮಂಗಳೂರು ವಿಶ್ವವಿದ್ಯಾಲಯವು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ಡಾ.ಯು. ಅರಬಿಯವರಿಗೆ ಸೇವೆಯಿಂದ ವಜಾಗೊಳಿಸುವ ಕುರಿತಂತೆ ಜಾರಿ ಮಾಡಿದ್ದ ಶೋಕಾಸ್ ನೋಟಿಸ್ ರದ್ದುಪಡಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮಂಗಳೂರು ವಿವಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಿವಿಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ.ಯು.ಅರಬಿ ವಿರುದ್ಧ ವಿದ್ಯಾರ್ಥಿನಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬಿ ಉತ್ತರಿಸಿದ್ದರೂ, ತೃಪ್ತಿಯಾಗದ ವಿವಿ ‘ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ನಿಯಂತ್ರಣ, ನಿಷೇಧ ಮತ್ತು ಪರಿಹಾರ) ಕಾಯ್ದೆ’ ಅಡಿ ವಿಚಾರಣೆ ನಡೆಸಲು ಆಂತರಿಕ ದೂರುಗಳ ಸಮಿತಿ ರಚಿಸಿತ್ತು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಸಮಿತಿ, ಅರಬಿ ಅವರನ್ನು ಪ್ರಕರಣದಲ್ಲಿ ದೋಷಿ ಎಂದು ತಿಳಿಸಿತ್ತು.
ಇದನ್ನು ಒಪ್ಪಿದ್ದ ವಿವಿಯ ಸಿಂಡಿಕೇಟ್, ಅರಬಿ ಅವರನ್ನು ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು. ಹಾಗೆಯೇ, ಆರೋಪಿ ಪ್ರಾಧ್ಯಾಪಕರನ್ನು ಅಮಾನತ್ತಿನಲ್ಲಿಟ್ಟು, ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆಗೆ ವಿವರಣೆ ಕೇಳಿ 2ನೆ ಶೋಕಾಸ್ ನೋಟಿಸ್ ನೀಡಿತ್ತು. ಆ ಬಳಿಕ ಡಾ. ಅರಬಿ 2ನೆ ಶೋಕಾಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಸೇವಾ ನಿಯಮಗಳಡಿ ಯಾವುದೇ ವಿಚಾರಣೆ ನಡೆಸದೆ ಸೇವೆಯಿಂದ ವಜಾಗೊಳಿಸುವ ಪ್ರಸ್ತಾವನೆ ಅಂಗೀಕರಿಸಿರುವುದು ನಿಯಮಬಾಹಿರ ಎಂದು ಅರಬಿ ದೂರಿದ್ದರು. ವಿವಿ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.







