ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ: ಪುಷ್ಕರ್ ಸಿಂಗ್ ಧಾಮಿ

Photo: PTI
ಡೆಹ್ರಾಡೂನ್,ಮಾ.22: ಸಮಾನ ನಾಗರಿಕ ಸಂಹಿತೆಯನ್ನು ಜಾರಿಗಳಿಸುವುದೇ ತನ್ನ ಸರಕಾರದ ಕಾರ್ಯಸೂಚಿಯಾಗಲಿಯೆಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಎರಡನೆ ಬಾರಿಗೆ ಪ್ರಮಾಣವಚನಸ್ವೀಕರಿಸಲಿರುವ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಎರಡನೆ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಬಿಜೆಪಿ ಘೋಷಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಧಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ತನ್ನ ಕ್ಷೇತ್ರದಲ್ಲಿ ಸೋಲನುಭವಿಸಿರುವ ಹೊರತಾಗಿಯೂ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ತನ್ನ ಸರಕಾರವು ಉತ್ತರಾಖಂಡವನ್ನು ಮುನ್ನಡೆಯ ರಾಜ್ಯವಾಗಿ ರೂಪಿಸಲಿದೆಯೆಂದು ಧಾಮಿ ಹೇಳಿದರು. ‘‘ಪ್ರಧಾನಿಯವರು ಉತ್ತರಾಖಂಡದ ಅಭಿವೃದ್ಧಿಯ ಕುರಿತಾದ ತನ್ನ ದೂರದೃಷ್ಟಿಯನ್ನು ಪ್ರಧಾನಿಯವರು ನಮಗೆ ಮನವರಿಕೆ ಮಾಡಿದ್ದಾರೆ. ಅವರ ದೂರದೃಷ್ಟಿಗೆ ಅನುಗುಣವಾಗಿಯೇ ನಾವು ಶ್ರಮಿಸಲಿದ್ದೇವೆ ಹಾಗೂ 2025ರಲ್ಲಿ ಉತ್ತರಾಖಂಡ ್ಯ ಅಸ್ತಿತ್ವಕ್ಕೆ ಬಂದು 25 ವರ್ಷ ತುಂಬಲಿದ್ದು, ಆ ವೇಳೆಗೆ ನಾವು ಅದನ್ನು ಮುನ್ನಡೆಯ ರಾಜ್ಯವಾಗಿ ರೂಪಿಸಲಿದ್ದೇವೆ ಎಂದವರು ಹೇಳಿದ್ದಾರೆ.
ಪುಷ್ಕರ್ ಸಿಂಗ್ ಧಾಮಿ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ರ ಕಾಪ್ರಿ ಅವರ ಎದುರು 6579 ಮತಗಳಿಂದ ಸೋಲನುಭವಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಆರು ತಿಂಗಳುಗಳೊಳಗೆ ಧಾಮಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ. ಅವರಿಗೆ ಅವಕಾಶ ನೀಡಲು, ವಿಧಾನಸಭೆಯ ಹಾಲಿ ಶಾಸಕರ್ಯಾರಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.







