ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಿಂದ ಬೃಹತ್ ಜಾಥಾ

ಸುರತ್ಕಲ್, ಮಾ22: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಕರೆ ನೀಡಿದ್ದ ಹೆಜಮಾಡಿ ಟೋಲ್‌ಗೇಟ್ ನಿಂದ ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ ವರೆಗೆ ಆಯೋಜಿಸಿದ್ದ ಬೃಹತ್ ಜಾಥಾವು ಮಂಗಳವಾರ ನಡೆಯಿತು.
ಜಾಥಾದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಸೇರಿದಂತೆ 2 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.
ಜಾಥಾಕ ಉದ್ದಕ್ಕೂ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಒತ್ತಾಯಿಸಿ ಹಾಗೂ ಹೆಜಮಾಡಿಯಲ್ಲಿ ಮುಲ್ಕಿ ಮತ್ತು ಪಡುಬಿದ್ರಿಯ ವಾಹನಗಳಿಗೆ ಉಚಿತ ಪ್ರವೇಶ ನೀಡುವಂತೆ ಒತ್ತಾಯಿಸಲಾಯಿತು ಅಲ್ಲದೆ ಶಾಸಕರು ಮತ್ತು ಸಂಸದರನ್ನು ಹೋರಾಟ ನಿರತರು ತರಾಟೆಗೆ ತೆಗೆದುಕೊಂಡರು ಅಲ್ಲದೆ ಟೋಲ್ ಗೇಟ್ ಮತ್ತು ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಅಲ್ಲದೆ ಸಂಸದರು ವಿವಿಧ ಸಂದರ್ಭಗಳಲ್ಲಿ ಟೋಲ್ ಗೇಟಿಗೆ ಸಂಬಂಧಿಸಿ ನೀಡಿರುವ ಹೇಳಿಕೆಗಳನ್ನು ಸಂಗ್ರಹಿಸಿ ಮಾಡಲಾಗಿದ್ದ ತಮಾಷೆಯ ಆಡಿಯೋಗಳನ್ನು ಮೈಕ್ ಗಳ ಮೂಲಕ ಬಿತ್ತರಿಸಲಾಗುತ್ತಿತ್ತು. ಬಳಿಕ ಎನ್ಐಟಿಕೆ ಟೋಲ್ ಗೇಟ್ ಬಳಿ ಜಾಥಾವು ಸಮಾರೋಪ ಗೊಂಡಿತು.
ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸರಕಾರ ಮತ್ತು ಜನಪ್ರತಿನಿಧಿಗಳು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾ ಜನರಿಗೆ ತೊಂದರೆ ನೀಡುತ್ತಿರುವ ಟೋಲ್ ಗೇಟ್ ತೆರವಿಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮನಸ್ಸು ಮಾಡಿದ್ದರೆ 24 ಗಂಟೆಯೊಳಗಾಗಿ ಎನ್ಐಟಿಕೆ ಟೋಲ್ ಗೇಟ್ ಅನ್ನು ತೆರವು ಮಾಡಬಹುದಿತ್ತು. ಆದರೆ, ಅವರ ನಿರ್ಲಕ್ಷ್ಯದಿಂದಾಗಿ ಅಕ್ರಮ ಕಾರ್ಯಾಚರಿಸುತ್ತಿದೆ ಎಂದು ಅಭಿಪ್ರಾಯಿಸಿದರು.
ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮತ್ತು ಸಂಸದರಿಗೆ ಜಿಲ್ಲೆಯ ಜನತೆ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಅಲ್ಲದೆ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಹೋರಾಟಗಳು ನಡೆಯಲಿವೆ ಎಂದು ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಎನ್ಐಟಿಕೆ ಯ ಅಕ್ರಮ ಟೋಲ್ಗೇಟ್ ವಿರುದ್ಧ ಚಾರಿತ್ರಿಕ ಪಾದಯಾತ್ರೆ ನಡೆಸಲಾಗಿದೆ. ಕಾನೂನು ಪಾಲನೆಯೊಂದಿಗೆ ಈ ಪಾದಯಾತ್ರೆ ಯಶಸ್ವಿಯಾಗಿರುವುದು ಇಲ್ಲಿನ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ ಎಂದು ನುಡಿದರು.
ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಅಕ್ರಮ ಟೋಲ್ಗೇಟ್ ವಿರುದ್ಧ ಪಕ್ಷಬೇಧವನ್ನು ಮರೆತು ಒಗ್ಗಟ್ಟಿನ ದರ್ಶನ ಮಾಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೃಹತ್ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಅಭಯಚಂದ್ರ ಜೈನ್ ಮಾಜಿ ಶಾಸಕ ಮೈದಿನ್ ಭಾವ ಡಿಬಿ ಮೋಹನ್ ವಸಂತ್ ಬೇರ್ನಾರ್ಡ್ ದಯಾನಂದ ಉಳಿಪಾಡಿ ಡಿ ಎಸ್ ಎಸ್ ನ ದೇವದಾಸ್ ಮುಸಬ್ಬ ಪಕ್ಷಿಕೆರೆ ಸದಾಶಿವ ಸಿಪಿಐಎಂನ ಯಾದವ ಮೋಹನ್ ಕೋಟ್ಯಾನ್ ಉಮೇಶ್ ಹೋರಾಟ ಸಮಿತಿ ಮುಖಂಡರಾದ ರಾಘವೇಂದ್ರ ಸೇರಿದಂತೆ ನೂರಾರು ಸಮಾನಮನಸ್ಕ ಸಂಘಟನೆಗಳು ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ಬಿಜೆಪಿ ನಾಯಕರ ಫೈಲ್ ಓಪನ್ ಮಾಡಿ ಕಣ್ಣೀರು ಸುರಿಸಲಿ
ಶಾಸಕರೊಬ್ಬರು ಸಿನಿಮಾ ಒಂದನ್ನು ನೋಡಿ ಕಣ್ಣೀರು ಸುರಿಸಿದ್ದಾರೆ. ಅವರು ಟೋಲ್ ಗೇಟ್ ನಲ್ಲಿ ಜನರ 300 ಕೋಟಿ ರೂಪಾಯಿ ಲೂಟಿ ಮಾಡಿರುವ ಬಗ್ಗೆ ಕಣ್ಣೀರು ಸುರಿಸಲಿ. ಅಕ್ರಮ ಟೋಲ್ಗೇಟ್ ಗೆ ಸಂಬಂಧಿಸಿದಂತೆ ಈವರೆಗೆ 18 ಬಾರಿ ಟೆಂಡರ್ ಕರೆಯಲಾಗಿದೆ. ಈ ಅನಧಿಕೃತ ಟೆಂಡರ್ ನಲ್ಲಿ ಇರುವ ಬಿಜೆಪಿ ನಾಯಕರ ಫೈಲ್ ಗಳು ಓಪನ್ ಮಾಡಬೇಕಾಗಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು.







