ಅಲ್ಪಸಂಖ್ಯಾತರ ವಸತಿ ಪ್ರದೇಶಗಳ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ. 22: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೈದರಾಲಿ ದರ್ಗಾ ಅಭಿವೃದ್ಧಿ, ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸವಿರುವ ಪ್ರದೇಶಗಳ ಅಭಿವೃದ್ಧಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಪಕ್ಷೇತರ ಸದಸ್ಯ ಎಚ್.ನಾಗೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಜನಸಂಖ್ಯೆಗನುಗುಣವಾಗಿ ಯಾವ ಪ್ರದೇಶವನ್ನು ಸ್ಲಂಗಳನ್ನಾಗಿ ಗುರುತಿಸಿ ಘೋಷಿಸುವ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ಹೇಳಿದರು.
‘ಮೊದಲ ಹಂತದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರಿರುವ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 2022-23ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಮಸೀದಿ ಮತ್ತು ದರ್ಗಾಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.





