ಮೃತ ವಿದ್ಯಾರ್ಥಿ ನವೀನ್‌ಗೆ ಅರ್ಥಪೂರ್ಣ ಶ್ರದ್ಧಾಂಜಲಿ

ಕೊಟ್ಟ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಳಿಸಿಕೊಂಡಿದ್ದಾರೆ. ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಶ್ಯದ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಹುತಾತ್ಮನಾದ ವಿದ್ಯಾರ್ಥಿ ನವೀನ್ ಅವರ ಮೃತದೇಹವನ್ನು ತಾಯ್ನಾಡಿಗೆ ತರಿಸಿಕೊಳ್ಳುವಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಯಶಸ್ವಿಯಾಗಿದ್ದಾರೆ. ಮೃತ ವಿದ್ಯಾರ್ಥಿಯನ್ನು ‘ಹುತಾತ್ಮ’ ಎಂದು ಕರೆಯುವುದರಲ್ಲಿ ಅತಿಶಯೋಕ್ತಿಯಿಲ್ಲ. ಆತ ಉಕ್ರೇನ್‌ನಂತಹ ಸಣ್ಣ ದೇಶಕ್ಕೆ ಹೋಗಿದ್ದು ಹಣ ಸಂಪಾದಿಸುವುದಕ್ಕಲ್ಲ. ಹೆಚ್ಚಿನ ಶಿಕ್ಷಣವನ್ನು ಪಡೆಯುವುದಕ್ಕಾಗಿ. ಭಾರತದಲ್ಲಿ ಅದಕ್ಕೆ ಯೋಗ್ಯ ವ್ಯವಸ್ಥೆಯಿದ್ದಿದ್ದರೆ ಉಕ್ರೇನ್‌ನಂತಹ ಸಣ್ಣ ದೇಶವನ್ನು ಹುಡುಕಿಕೊಂಡು ಹೋಗುವ ಅಗತ್ಯ ನವೀನ್‌ಗೆ ಇದ್ದಿರಲಿಲ್ಲ. ಉಕ್ರೇನ್‌ನಲ್ಲಿ ಯುದ್ಧ ಘೋಷಣೆಯಾದಾಗ, ಕಂಗೆಡದೆ ಅಲ್ಲಿಂದ ಪಾರಾಗುವ ಸರ್ವ ಪ್ರಯತ್ನದ ನಡುವೆಯೇ ಆತ ಮೃತಪಟ್ಟ. ಆತನ ಬದ್ಧತೆ, ತೋರಿಸಿದ ಧೈರ್ಯ ಯಾವ ಸೈನಿಕನ ಧೈರ್ಯಕ್ಕಿಂತಲೂ ಕಡಿಮೆಯಿಲ್ಲ. ಉಕ್ರೇನ್‌ನಿಂದ ಮರಳಿದ ಎಲ್ಲ ವಿದ್ಯಾರ್ಥಿಗಳ ಧೈರ್ಯವೂ ಈ ನಿಟ್ಟಿನಲ್ಲಿ ಶ್ಲಾಘನೀಯವಾಗಿದೆ. ಮೃತದೇಹಕ್ಕೂ ತನ್ನದೇ ಆದ ಘನತೆಯಿದೆ. ಕುಟುಂಬಕ್ಕೆ ಅದರ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ತನ್ನ ಮಗ ಅನಾಥನಂತೆ ಮೃತಪಟ್ಟ ಎನ್ನುವುದನ್ನು ಯಾವ ಕುಟುಂಬಕ್ಕೂ ಸಹಿಸುವುದಕ್ಕೆ ಸಾಧ್ಯವಿಲ್ಲ. ಕನಿಷ್ಠ ಅಂತಿಮ ಸಂಸ್ಕಾರವನ್ನು ಪೂರೈಸುವ ಮೂಲಕ, ತಮ್ಮನ್ನು ತಾವು ಸಮಾಧಾನಿಸಿಕೊಳ್ಳಲು ಅವರಿಗೊಂದು ಅವಕಾಶ ನೀಡಿದ ಸರಕಾರದ ಕೆಲಸ ಅಭಿನಂದನೀಯವಾಗಿದೆ.
ಇದೇ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಸರಕಾರ ಇನ್ನೊಂದು ಮಹತ್ವದ ಘೋಷಣೆಯನ್ನೂ ಮಾಡಿದೆ. ಉಕ್ರೇನ್‌ನಿಂದ ಹಿಂದಿರುಗಿದ ಎಲ್ಲ ವಿದ್ಯಾರ್ಥಿಗಳಿಗೂ ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಉಚಿತ ಕಲಿಕೆಗೆ ಅವಕಾಶ ನೀಡುವುದಾಗಿ ಸರಕಾರ ಘೋಷಿಸಿದೆ. ಮೃತ ವಿದ್ಯಾರ್ಥಿ ನವೀನ್‌ಗೆ ಇದೊಂದು ಅರ್ಥಪೂರ್ಣ ಶ್ರದ್ಧಾಂಜಲಿಯಾಗಿದೆ. ಶಿಕ್ಷಣಕ್ಕಾಗಿ ದೂರದ ದೇಶಕ್ಕೆ ಹೋಗಿ, ಅಲ್ಲಿನ ಯುದ್ಧಪೀಡಿತ ಭೂಮಿಯಲ್ಲಿ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ಮರಳಿದ ವಿದ್ಯಾರ್ಥಿಗಳ ಪಾಲಿಗೆ ಇದೊಂದು ಅಪರೂಪದ ಕೊಡುಗೆಯಾಗಿದೆ.
ಕೇಂದ್ರ ಸರಕಾರದ ಹತ್ತು ಹಲವು ಪ್ರಮಾದಗಳಿಂದ ಉಕ್ರೇನ್‌ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಯುದ್ಧಭೂಮಿಯಲ್ಲಿ ಸಿಲುಕಿಕೊಳ್ಳಬೇಕಾಯಿತು. ಯುದ್ಧ ಘೋಷಣೆಯಾದ ಬಳಿಕ ಸರಕಾರ ಎಚ್ಚೆತ್ತುಕೊಂಡ ಪರಿಣಾಮವಾಗಿ ವಿದ್ಯಾರ್ಥಿಗಳು ಗಡಿ ತಲುಪಲಾರದೆ ಒದ್ದಾಡಬೇಕಾಯಿತು. ವಿದ್ಯಾರ್ಥಿಗಳು ನೂರಾರು ಕಿಲೋಮೀಟರ್ ನಡೆದು ಗಡಿ ತಲುಪಿದ ಬಳಿಕ ಅವರನ್ನು ವಿಮಾನದ ಮೂಲಕ ಭಾರತಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ರಾಯಭಾರ ಕಚೇರಿಯ ಬೇಜವಾಬ್ದಾರಿತನ ಸಹಜವಾಗಿಯೇ ವಿದ್ಯಾರ್ಥಿಗಳಲ್ಲಿ ಸಿಟ್ಟನ್ನು ತರಿಸಿತ್ತು. ಒಂದೆಡೆ ಪ್ರಾಣಭಯ. ಮಗದೊಂದೆಡೆ ಕನಸುಗಳೆಲ್ಲ ನುಚ್ಚುನೂರು. ಭವಿಷ್ಯದ ಮುಂದೆ ಗಾಢ ಅಂಧಕಾರ. ಜೊತೆಗೆ ರಶ್ಯನ್ ಮತ್ತು ಉಕ್ರೇನ್ ಸೈನಿಕರಿಂದ ಅವಮಾನ. ಇಂತಹ ಸಂದರ್ಭದಲ್ಲಿ ಭಾರತ ಸರಕಾರದ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುವುದು ಸಹಜವೇ ಆಗಿದೆ. ಕೊನೆಗೂ ಅವರನ್ನು ಭಾರತಕ್ಕೆ ತಲುಪಿಸುವಲ್ಲಿ ಸರಕಾರ ಯಶಸ್ವಿಯಾಯಿತು. ಆದರೆ ಇದರಿಂದಾಗಿ ವಿದ್ಯಾರ್ಥಿಗಳ ಸಮಸ್ಯೆ ಸಂಪೂರ್ಣ ಪರಿಹಾರವಾಗುವುದಿಲ್ಲ, ನಿಜವಾದ ಸಮಸ್ಯೆ ಶುರುವಾಗುವುದೇ ಭಾರತಕ್ಕೆ ಬಂದು ತಲುಪಿದ ಬಳಿಕ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ ವಿದ್ಯಾರ್ಥಿಗಳೆಲ್ಲರೂ ಪ್ರತಿಭಾವಂತರೇ ಆಗಿದ್ದಾರೆ. ಪಿಯುಸಿ ಮತ್ತು ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದವರು ಇವರು. ನೀಟ್‌ನ ಸ್ಪರ್ಧೆಯಲ್ಲಿ ಹಿನ್ನಡೆಯಾಗಿ ಅನಿವಾರ್ಯವಾಗಿ ಉಕ್ರೇನ್‌ಗೆ ತೆರಳಿದವರು. ಭಾರತಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶವಿರುವುದರಿಂದ ಅವರು ಸಾಲಸೋಲ ಮಾಡಿ ತೆರಳಿದ್ದರು. ಹಲವರು ವೈದ್ಯಕೀಯ ಶಿಕ್ಷಣದ ಅಂತಿಮ ಹಂತದಲ್ಲಿದ್ದರು. ಆದರೆ ಯುದ್ಧ ಅವರ ಕನಸನ್ನು ಸರ್ವ ನಾಶ ಮಾಡಿತು. ಇದೇ ಸಂದರ್ಭದಲ್ಲಿ ಕಲಿಕೆಗಾಗಿ ಅವರು ವ್ಯಯಿಸಿದ ಎಲ್ಲ ಹಣವೂ ವ್ಯರ್ಥವಾಯಿತು. ಜೊತೆಗೆ ಶಿಕ್ಷಣವನ್ನು ಮುಂದುವರಿಸುವ ಸಾಧ್ಯತೆಗಳೂ ಅವರ ಮುಂದೆ ಕಾಣುತ್ತಿಲ್ಲ. ಮನೆಗೆ ಮರಳಿದ ಈ ವಿದ್ಯಾರ್ಥಿಗಳು ಸಂಪೂರ್ಣ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿದ್ದವು. ಈ ದೇಶದ ಆಸ್ತಿಯಾಗಬಹುದಾಗಿದ್ದ ಅಷ್ಟೂ ಯುವಕರು ಅಕ್ಷರಶಃ ಬೀದಿಪಾಲಾಗಿ ಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಸರಕಾರದ ಕರ್ತವ್ಯವಾಗಿದೆ. ‘ಉಕ್ರೇನ್‌ನ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಕಲಿಕೆಗೆ ಅವಕಾಶ’ ಎನ್ನುವ ಭರವಸೆ ನೀಡುವ ಮೂಲಕ ಸರಕಾರ ತನ್ನ ಕರ್ತವ್ಯವನ್ನು ನಿಭಾಯಿಸಿದೆ.
ನಮ್ಮ ನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯದಂತಹ ಶಿಕ್ಷಣಕ್ಕೆ ಉಕ್ರೇನ್‌ನಂತಹ ಸಣ್ಣ ದೇಶಗಳನ್ನು ಅವಲಂಬಿಸಲು ಕಾರಣವೇನು ಎನ್ನುವುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲವಾಗಿದೆ. ಪೇಮೆಂಟ್ ಸೀಟ್‌ಗಳಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಯುವುದಕ್ಕೆ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸರಕಾರ ಯೋಚಿಸಬೇಕು. ಹಾಗೆಯೇ ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಬಗ್ಗೆ ಸರಕಾರ ಆಸಕ್ತಿ ವಹಿಸಬೇಕು. ಇದೇ ಸಂದರ್ಭದಲ್ಲಿ ನೀಟ್‌ನಿಂದಾಗಿ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೆಲಸವೂ ನಡೆಯಬೇಕು. ಉಕ್ರೇನ್‌ನಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ವೈದ್ಯಕೀಯ ಶಿಕ್ಷಣವನ್ನು ನೀಡಲು ಸಾಧ್ಯವಿದೆಯಾದರೆ, ನಮಗೆ ಯಾಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಕಲಿಕೆಗಾಗಿ ಯಾವುದೇ ದೇಶದಲ್ಲಿ ನಮ್ಮ ಯುವಕರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ.







