ಶ್ರೀಕ್ಷೇತ್ರ ಕದ್ರಿಯ ಹುಂಡಿಯಿಂದ ಹಣ ಕಳವು ಆರೋಪ: ಮಹಿಳಾ ಟ್ರಸ್ಟಿ ವಿರುದ್ಧ ಆಡಳಿತಾಧಿಕಾರಿಗೆ ದೂರು

ಸಾಂದರ್ಭಿಕ ಚಿತ್ರ
ಮಂಗಳೂರು : ನಗರದ ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರದ ಕಾಣಿಕೆ ಹುಂಡಿಯಿಂದ ಮಹಿಳಾ ಟ್ರಸ್ಟಿಯೊಬ್ಬರು ಹಣ ಕಳವು ಮಾಡಿರುವ ಆರೋಪ ಕೇಳಿ ಬಂದಿದೆ.
ತಿಂಗಳ ಹಿಂದೆ ನಡೆದ ಈ ಕೃತ್ಯವು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕ್ಷೇತ್ರದ ಆಡಳಿತಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಲಾಗಿದೆ.
ಫೆ.24ರಂದು ಕಾಣಿಕೆ ಹುಂಡಿಯ ಹಣ ಎಣಿಸುವ ವೇಳೆ ಮಹಿಳಾ ಟ್ರಸ್ಟಿ ಹಣ ಎಗರಿಸಿರುವುದು ಸಿಸಿ ಕ್ಯಾಮರಾದ ದೃಶ್ಯವು ಸಾಕ್ಷಿ ಒದಗಿಸಿದೆ. ಟ್ರಸ್ಟಿಯೊಬ್ಬರಿಗೆ ಅನಾಮಧೇಯ ಕರೆ ಮಾಡಿದ ಮಹಿಳೆಯೊಬ್ಬರು ನಿಮ್ಮ ಟ್ರಸ್ಟಿಯಲ್ಲೊಬ್ಬರು ಹುಂಡಿಯ ಹಣವನ್ನು ಎಗರಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರು ಇತರರ ಗಮನ ಸೆಳೆದು ಸಿಸಿಟಿವಿ ಪರಿಶೀಲಿಸುವಂತೆ ಮಾಡಿದ್ದಾರೆ. ಆವಾಗ ಮಹಿಳಾ ಟ್ರಸ್ಟಿ ಹಣ ಎಗರಿಸುವುದು ಕಂಡು ಬಂದಿದೆ. ಬಳಿಕ ವ್ಯವಸ್ಥಾಪನಾ ಸಮಿತಿಯ ತುರ್ತು ಸಭೆ ನಡೆದಾಗ ಹಣ ಕಳವು ಮಾಡಿರುವುದನ್ನು ಮಹಿಳಾ ಟ್ರಸ್ಟಿ ಒಪ್ಪಿದ್ದಾರಲ್ಲದೆ, ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆದರೆ ಈವರೆಗೆ ರಾಜೀನಾಮೆ ನೀಡದ ಕಾರಣ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸರಕಾರದಿಂದ ನೇಮಕಗೊಂಡ ಟ್ರಸ್ಟಿಯೇ ಹುಂಡಿಗೆ ಕಣ್ಣು ಹಾಕಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ವಿಷಯವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಅವರು ಕ್ರಮದ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.