ಮಹಾರಾಷ್ಟ್ರ: ಸೆಪ್ಟಿಕ್ ಟ್ಯಾಂಕ್ ದುರಸ್ತಿಗೆ ತೆರಳಿದ ಮೂವರು ವಿಷಾನಿಲ ಸೇವಿಸಿ ಸಾವು; ಇನ್ನಿಬ್ಬರು ಗಂಭೀರ

ಸಾಂದರ್ಭಿಕ ಚಿತ್ರ (PTI)
ಚಂದ್ರಾಪುರ್: ಮಹಾರಾಷ್ಟ್ರಾದ ಬಲ್ಲಾರ್ಪುರ್ ಎಂಬಲ್ಲಿನ ಡಬ್ಲ್ಯುಸಿಎಲ್ ಸಸ್ತಿ ಟೌನ್ಶೀಪ್ನಲ್ಲಿ ಒಳಚರಂಡಿ ಸೆಪ್ಟಿಕ್ ಟ್ಯಾಂಕ್ನಿಂದ ಹೊರಹೊಮ್ಮಿದ ವಿಷಾನಿಲ ಸೇವಿಸಿ ವೆಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ ಉದ್ಯೋಗಿಯೊಬ್ಬರು ಹಾಗೂ ಇಬ್ಬರು ಗುತ್ತಿಗೆ ಕಾರ್ಮಿಕರು ಮೃತಪಟ್ಟರೆ ಇತರ ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾದವರ ಪೈಕಿ ಒಬ್ಬರು ವೆಸ್ಟರ್ನ್ ಕೋಲ್ಫೀಲ್ಡ್ಸ್ ಉದ್ಯೋಗಿಯಾಗಿದ್ದು ವಿಷಾನಿಲ ಸೇವಿಸಿ ಅವರು ಪ್ರಜ್ಞಾಹೀನರಾಗಿದ್ದರು.
ಡಬ್ಲ್ಯುಸಿಎಲ್ನಲ್ಲಿ ಒಳಚರಂಡಿ ಸಂಬಂಧಿತ ಕೆಲಸಗಳ ವೇಳೆ ಸುರಕ್ಷತೆಯ ಕೊರತೆ ಹಾಗೂ ಸೆಪ್ಟಿಕ್ ಟ್ಯಾಂಕ್ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಟೌನ್ಶಿಪ್ನ ಒಳಚರಂಡಿ ತ್ಯಾಜ್ಯ ಪಂಪ್ ಹೌಸ್ ಬಳಿಯಿರುವ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲೆಂದು ರಾಜು ಜಂಜರಿಯಾ ಮತ್ತು ಸುಭಾಶ್ ಖಂಡಲ್ಕರ್ ಎಂಬ ಇಬ್ಬರು ಗುತ್ತಿಗೆ ಕಾರ್ಮಿಕರನ್ನು ಮಂಗಳವಾರ ಕಳುಹಿಸಲಾಗಿತ್ತು. ಇಲ್ಲಿನ ಒಳಚರಂಡಿ ಜಾಲ ಬ್ಲಾಕ್ ಆಗಿರುವುದರಿಂದ ಸ್ಥಳದಿಂದ ದುರ್ನಾತ ಹೊರಹೊಮ್ಮುತ್ತಿರುವ ಕುರಿತು ಹಲವು ದೂರುಗಳ ನಂತರ ಕಾಮಗಾರಿಗಾಗಿ ಕಾರ್ಮಿಕರನ್ನು ಕಳುಹಿಸಲಾಗಿತ್ತು.
ಹತ್ತು ಅಡಿ ಆಳದ ಸೆಪ್ಟಿಕ್ ಟ್ಯಾಂಕ್ ಪ್ರವೇಶಿಸಿದ ಇಬ್ಬರು ಕಾರ್ಮಿಕರೂ ಪ್ರಜ್ಞಾಹೀನರಾಗಿದ್ದರು. ಕಾಮಗಾರಿ ಉಸ್ತುವಾರಿ ವಹಿಸಿದ್ದ ಡಬ್ಲ್ಯುಸಿಎಲ್ ಉದ್ಯೋಗಿ ಸುಶೀಳ್ ಕೊರ್ಡೆ ಸಂಶಯಗೊಂಡು ಏನಾಯಿತೆಂದು ಪರಿಶೀಲಿಸಲು ತೆರಳಿದಾಗ ಅವರು ಕೂಡ ಪ್ರಜ್ಞಾಹೀನರಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು. ರಕ್ಷಣಾ ಕಾರ್ಯಾಚರಣೆ ವೇಳೆ ಇನ್ನಿಬ್ಬರು ಕಾರ್ಮಿಕರು ಪ್ರಜ್ಞಾಹೀನರಾದರು ಎಂದು ವರದಿಯಾಗಿದೆ.
ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೊದಲು ಸೆಪ್ಟಿಕ್ ಟ್ಯಾಂಕ್ ಪ್ರವೇಶಿಸಿದ ಕಾರ್ಮಿಕರಿಬ್ಬರೂ ಮೃತಪಟ್ಟಿದ್ದರು. ಇನ್ನೊಬ್ಬ ಉದ್ಯೋಗಿ ಸಂಜೆ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.







