ಕುಂದಾಪುರ: 2 ಕಡೆ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಆರು ದೋಣಿ ವಶಕ್ಕೆ
ಕುಂದಾಪುರ, ಮಾ.23: ಇಲ್ಲಿನ ತ್ರಾಸಿ ಗ್ರಾಮದ ಅರಮ ದೇವಸ್ಥಾನದ ಸಮೀಪದ ಸೌಪರ್ಣಿಕಾ ನದಿಯಲ್ಲಿ ಅನಧಿಕೃತ ಮರಳುಗಾರಿಕೆಗೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 4 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಅದೇರೀತಿ ಮೊವಾಡಿ ಬ್ರಿಡ್ಜ್ ಸಮೀಪ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 2 ದೋಣಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತ್ರಾಸಿ, ಮೊವಾಡಿ, ಗುಡ್ಡೆಯಂಗಡಿಯ ಸೌಪರ್ಣಿಕಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಸ್ವತಃ ದೋಣಿಯ ಮೂಲಕ ತೆರಳಿ ದಾಳಿ ನಡೆಸಿದ್ದಾರೆ.
ಮೊವಾಡಿ, ನಾಡ ಹಾಗೂ ಬಡಾಕೆರೆ ವ್ಯಾಪ್ತಿಯಲ್ಲಿ ಅನೇಕ ಕಡೆ ಮರಳು ಗಣಿಗಾರಿಕೆಗೆ ನಡೆಸುವ ಮರಳು ದಕ್ಕೆಗಳಿದ್ದು, ಗಣಿ ಇಲಾಖೆಯ ಭೂವಿಜ್ಞಾನಿ ದಾಳಿ ನಡೆಸಿದ ಸಂದರ್ಭದಲ್ಲಿ ನಾಡ ಬಡಾಕೆರೆ ವ್ಯಾಪ್ತಿಯ ಕೆಲವೆಡೆ ಅನಧಿಕೃತ ಮರಳು ದಂಧೆ ನಡೆಸುವವರು ಮರಳು ಗಣಿಗಾರಿಕೆಗೆ ಬಳಸುವ ದೋಣಿಗಳನ್ನು ಹಾಗೂ ಇನ್ನಿತರ ಪರಿಕರಗಳನ್ನು ನೀರಿನಲ್ಲಿ ಮುಳುಗಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.