ಶಿವಮೊಗ್ಗ: ಮುಷ್ತಾಕ್ ಹೆಸರಲ್ಲಿ ಬಿಜೆಪಿ ಎಮ್ಮೆಲ್ಸಿಗೆ ಕೊಲೆ ಬೆದರಿಕೆ ಹಾಕಿದ್ದ ಶ್ರೀಕಾಂತ್ ಬಂಧನ

ಶ್ರೀಕಾಂತ್
ಶಿವಮೊಗ್ಗ, ಮಾ.23: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರಿಗೆ ಮುಸ್ಲಿಮ್ ಯುವಕನ ಹೆಸರಿನಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಾಗಲಕೋಟೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಗೋಕಾಕ್ ನ ಶಿಂದಿಕುರಬೆಟ್ ನಿವಾಸಿ ಸಿದ್ಧಾರೂಡ ಶ್ರೀಕಾಂತ್(31) ಬಂಧಿತ ಆರೋಪಿಯಾಗಿದ್ದಾನೆ. ಈತ ಡಿ.ಎಸ್.ಅರುಣ್ ಅವರಿಗೆ ಫೇಸ್ ಬುಕ್ ನಲ್ಲಿ ಮುಷ್ತಾಕ್ ಎಂಬ ಹೆಸರಿನಲ್ಲಿ ಕೊಲೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದ ವೇಳೆ ಡಿ.ಎಸ್.ಅರುಣ್ ಮುಸ್ಲಿಮ್ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಮುಷ್ತಾಕ್ ಅಲಿ ಎಂಬ ಯುವಕನ ಹೆಸರಿನಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಡಿ.ಎಸ್.ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ಬಗ್ಗೆ ಶಿವಮೊಗ್ಗ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ನಡುವೆ ಬೇರೊಂದು ಪ್ರಕರಣದಲ್ಲಿ ಬಾಗಲಕೋಟೆಯಲ್ಲಿ ಬಂಧಿಸಲ್ಪಟ್ಟಿದ್ದ ಶ್ರೀಕಾಂತ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಮುಸ್ಲಿಮ್ ಯುವಕನ ಹೆಸರಿನಲ್ಲಿ ಅರುಣ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನಿಮ್ಮ ತಲೆಯಲ್ಲಿ ಇವತ್ತು ಕೇವಲ ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೇ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು ಮಕ್ಕಳೇ ನಮ್ಮವರ ಟಾರ್ಗೆಟ್..." ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬೆದರಿಕೆ ಹಾಕಲಾಗಿತ್ತು.







