ಪುತ್ತೂರು: ಸ್ಕೂಟರ್ ಸವಾರನಿಗೆ 'ಸೀಟ್ ಬೆಲ್ಟ್' ಧರಿಸದ್ದಕ್ಕೆ ದಂಡ!
ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿಯ ಎಡವಟ್ಟು: ಮಾತುಕತೆಯಲ್ಲಿ ಇತ್ಯರ್ಥ

ಪುತ್ತೂರು, ಮಾ.23: 'ಸೀಟ್ ಬೆಲ್ಟ್' ಧರಿಸಿಲ್ಲ ಎಂದು ಸ್ಕೂಟರ್ ಸವಾರರೊಬ್ಬರಿಂದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ದಂಡ ವಸೂಲಿ ಮಾಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಈ ದಂಡದ ಬಗ್ಗೆ ವಿಚಾರಿಸಲು ಹೋಗಿದ್ದ ಪುತ್ತೂರು ನಗರಸಭೆಯ ಸದಸ್ಯ ಹಾಗೂ ಠಾಣೆಯ ಎಸ್ಸೈ ನಡುವೆ ಮಾತಿನ ಚಕಮಕಿ ನಡೆದು ಬಳಿಕ ನಗರ ಠಾಣೆಯ ಇನ್ ಸ್ಪೆಕ್ಟರ್ ಆಗಮಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಬೆಳಿಯಪ್ಪ ಗೌಡ ಎಂಬವರು ಮಾ.7ರಂದು ತನ್ನ ಸ್ಕೂಟರ್‌ನಲ್ಲಿ ಪುತ್ತೂರು ನಗರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆಯಲ್ಲಿ ರಸ್ತೆ ಗಸ್ತು ನಿರತರಾಗಿದ್ದ ಪೊಲೀಸರೊಬ್ಬರು ಸ್ಕೂಟರ್ ನಿಲ್ಲಿಸುವಂತೆ ಸೂಚಿಸಿ ದಾಖಲೆ ಪತ್ರ ಪರಿಶೀಲನೆ ನಡೆಸಿ ಬಳಿಕ ರೂ. 500 ದಂಡ ವಸೂಲಿ ಮಾಡಿದ್ದರು. ಈ ಬಗ್ಗೆ ನೀಡಿದ್ದ ರಶೀದಿಯಲ್ಲಿ ಅಪರಾಧ ವಿಭಾಗದಲ್ಲಿ 'ವಿದ್ದೌಟ್ ಸೀಟ್ ಬೆಲ್ಟ್' ಎಂದು ಬರೆಯಲಾಗಿತ್ತು. ಅಲ್ಲದೆ ರಶೀದಿಯಲ್ಲಿ 25-02-2021 ಎಂದು ಒಂದು ವರ್ಷ ಹಿಂದಿನ ದಿನಾಂಕ ನಮೂದಾಗಿರುವುದನ್ನು ಬೆಳ್ಳಿಯಪ್ಪ ಗಮನಿಸಿದರು.
ಈ ಕುರಿತು ಎಸ್ಸೈ ಅವರಲ್ಲಿ ವಿಚಾರಿಸಿದಾಗ ಯಾವುದೇ ಸ್ಪಂದನ ಸಿಕ್ಕಿಲ್ಲವೆಂದು ಬೆಳಿಯಪ್ಪ ಗೌಡ ಅವರು ನಗರಸಭಾ ಸದಸ್ಯ ಶಿವರಾಮ ಸಫಲ್ಯ ಅವರಿಗೆ ವಿಚಾರ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಶಿವರಾಮ ಸಫಲ್ಯ ಅವರು ಮಹಿಳಾ ಠಾಣೆಗೆ ಆಗಮಿಸಿ ವಿಚಾರಿಸಿದಾಗ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸುನೀಲ್ ಆಗಮಿಸಿ ಮಾತುಕತೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಿದರು ಎಂದು ತಿಳಿದು ಬಂದಿದೆ.







