ಉತ್ತರಪ್ರದೇಶ: ವಿಷಪೂರಿತ ಚಾಕಲೇಟನ್ನು ಸೇವಿಸಿ ನಾಲ್ವರು ಮಕ್ಕಳು ಮೃತ್ಯು

ಲಕ್ನೊ: ತಮ್ಮ ಮನೆಯ ಹೊರಗಿನ ರಸ್ತೆಯಲ್ಲಿ ಬಿದ್ದುಕೊಂಡಿದ್ದ ವಿಷಪೂರಿತ ಚಾಕಲೇಟನ್ನು ಸೇವಿಸಿ 7 ವರ್ಷದೊಳಗಿನ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಖುಷಿನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನ್ಸಾಯಿ ಗ್ರಾಮದಲ್ಲಿ ಚಾಕಲೇಟನ್ನು ತಿಂದ ಮಕ್ಕಳು ಸಾವನ್ನಪ್ಪಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಖುಷಿನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಿತೇಶ್ ಕುಮಾರ್ ಸಿಂಗ್ ಹೇಳಿದರು.
ಸಿನ್ಸಾಯಿ ಗ್ರಾಮದ ಮಕ್ಕಳು ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಚಾಕಲೇಟನ್ನು ಎತ್ತಿಕೊಂಡು ಸೇವಿಸಿದ್ದಾರೆ. ಸಂತ್ರಸ್ತರ ಪೋಷಕರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ದಿನಗೂಲಿ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಕಲೇಟ್ ಸೇವಿಸಿದ ತಕ್ಷಣ ಮೂವರು ಮಕ್ಕಳು ಪ್ರಜ್ಞಾಹೀನರಾಗಿದ್ದು ಕುಟುಂಬ ಸದಸ್ಯರು ಹಾಗೂ ಸ್ಥಳೀಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಚಾಕಲೇಟ್ ಸೇವಿಸಿದ್ದಾಗಿ ಇನ್ನೊಂದು ಮಗು ಹೇಳಿದೆ ಎಂದು ತಿಳಿದುಬಂದಿದೆ.
ವಿಷಮಿಶ್ರಿತ ಚಾಕಲೇಟನ್ನು ಯಾರೋ ಒಬ್ಬರು ರಸ್ತೆಗೆ ಎಸೆದಿದ್ದಾರೆ ಎಂದು ಶಂಕಿಸಿರುವ ಪೊಲೀಸರು ಸ್ಪಷ್ಟ ಕಾರಣ ಕಂಡುಹಿಡಿಯಲು ಶವಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.







