ಆ್ಯಸಿಡ್ ಬಳಸಿ ವ್ಯಕ್ತಿಯ ಹಣೆಯಲ್ಲಿ ತ್ರಿಶೂಲ ಬಿಡಿಸಿದ ಕಿಡಿಗೇಡಿಗಳು: ಇದು ಹೋಳಿ ಬಣ್ಣದ ಅಡ್ಡಪರಿಣಾಮ ಎಂದ ಪೊಲೀಸರು !

ಲಕ್ನೋ: ಉತ್ತರ ಪ್ರದೇಶದ ಸಹರಣಪುರ ಎಂಬಲ್ಲಿನ ಕಾನ್ಶೀರಾಮ್ ಕಾಲನಿಯ ನಿವಾಸಿಯಾಗಿರುವ ವ್ಯಕ್ತಿಯೋರ್ವನ ಹಣೆಯಲ್ಲಿ ಹೋಳಿಯ ದಿನವಾದ ಮಾರ್ಚ್ 18 ರಂದು ಆಸಿಡ್ ಬಳಸಿ ತ್ರಿಶೂಲದ ಚಿತ್ರವನ್ನು ಕೆಲ ಕಿಡಿಗೇಡಿಗಳು ಬಿಡಿಸಿದ್ದಾರೆ ದೂರು ನೀಡಲಾಗಿದೆ. ಆದರೆ ಪೊಲೀಸರು ಮಾತ್ರ ಇದು ಹೋಳಿಯ ಬಣ್ಣದಿಂದ ಚರ್ಮಕ್ಕೆ ಉಂಟಾದ ಅಡ್ಡ ಪರಿಣಾಮ ಎಂದು ಹೇಳುತ್ತಿದ್ದಾರೆ.
ಆದೇಶ್ ಎಂಬ ಹೆಸರಿನ ವ್ಯಕ್ತಿಯ ಪ್ರಕಾರ, ಮಾರ್ಚ್ 18ರಂದು ಬೆಳಿಗ್ಗೆ ಕೆಲ ಗ್ಲಾಸ್‍ಗಳನ್ನು ತೊಳೆಯಲು ಆತನಿಗೆ ಹೇಳಲಾಗಿತ್ತು. ನೀರು ತರಲು ಹೋದಾಗ, ಮದ್ಯ ಇದ್ದ ಗ್ಲಾಸ್‍ಗಳು ಬಿದ್ದವು. ಆಗ ಮೂರ್ನಾಲ್ಕು ಮಂದಿ ಆತನಿಗೆ ಥಳಿಸಿ, ʼಅವನು ಚಮಾರ್ ಜಾತಿಯವ ಆತ ಮರೆಯದ ಗುರುತನ್ನು ಆತನಿಗೆ ನೀಡುವ' ಎಂದು ಹೇಳಿ ತನ್ನ ಹಣೆಗೆ ಆಸಿಡ್ ಬಳಸಿ ತ್ರಿಶೂಲದ ಚಿತ್ರ ಬಿಡಿಸಿದ್ದಾರೆಂದು ಹೇಳಿದ್ದಾನೆ.
ಆದರೆ ಆಸಿಡ್ ಬಳಸಲಾಗಿಲ್ಲ ಇದು ಹೋಳಿ ಬಣ್ಣದ ಅಡ್ಡ ಪರಿಣಾಮ ಎಂದು ಹಿರಿಯ ಪೊಲೀಸ್ ಅಧಿಕಾರಿ ಆಕಾಶ್ ತೋಮರ್ ಹೇಳಿದ್ದಾರೆ.
"ಆತ ಇಬ್ಬರು ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿದ್ದ. ನಂತರ ಹೋಳಿಯಾಟ ಆಡಿದಾಗ ಬಣ್ಣ ಅಡ್ಡ ಪರಿಣಾಮ ಬೀರಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ, ಆಸಿಡ್ ಬಳಕೆಯಾಗಿಲ್ಲ. ಆತ ತನ್ನ ಸ್ನೇಹಿತರಿಂದ ರೂ 10,000 ಸಾಲ ಪಡೆದಿದ್ದ ಹಾಗೂ ಆ ಹಣ ವಾಪಸ್ ನೀಡುವುದನ್ನು ತಪ್ಪಿಸಲು ಸುಳ್ಳು ಆರೋಪ ಹೊರಿಸುತ್ತಿದ್ದಾನೆ" ಎಂದು ಅವರು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.







