ಇಂತಹ ಮಾತುಗಳು ಇವರಿಗೆ ಶೋಭೆ ತರುವಂತಹದ್ದಲ್ಲ
ಪ್ರತಿಕ್ರಿಯೆ
32 ವರ್ಷಗಳಿಂದ ಏನನ್ನೂ ಪ್ರತಿಭಟಿಸದವರು ಈಗ ಪ್ರತಿಭಟಿಸಿದ್ದು ಏಕೆ! ಎಂದು (ಪತ್ರಿಕಾ ವರದಿ 21.03.2021) ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಪ್ರಶ್ನಿಸಿರುವ ವರದಿ ಕುರಿತು ಪ್ರತಿಕ್ರಿಯೆ.
32 ವರ್ಷಗಳಿಂದ ಜಾತ್ಯತೀತ ಮನಸ್ಸುಗಳು ರಂಗಾಯಣದ ನಿರ್ದೇಶಕರಾಗಿದ್ದರು. ಈಗ ಜಾತಿವಾದಿ, ಕೋಮುವಾದಿ ಮನಸ್ಸು ಆ ಸ್ಥಾನಕ್ಕೆ ಬಂದು ಗೊಂದಲ ಸೃಷ್ಟಿಸಿದ್ದಕ್ಕೆ ಸಾಮಾಜಿಕ ಕಳಕಳಿಯಿಂದ ಪ್ರಶ್ನೆ ಮಾಡಬೇಕಾಯಿತು ಎಂಬುದನ್ನು ಇವರು ಅರ್ಥಮಾಡಿಕೊಳ್ಳಬೇಕು.
ಹಿರಿಯ ಸಮಾಜವಾದಿ ಪ. ಮಲ್ಲೇಶ್ ಅವರ ಬಗ್ಗೆ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಹೇಳಿರುವ ಮಾತುಗಳು ಒಂದೂ ಒಪ್ಪುವಂತವಲ್ಲ ಅತ್ಯಂತ ಖಂಡನೀಯ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಗವನ್ನು ಪ. ಮಲ್ಲೇಶ್ ಅವರು ಪೆಟ್ರೊಲ್ ಬಂಕ್ ಮಾಡಿಕೊಳ್ಳಲು ಹೊಡೆದುಕೊಂಡಿರುವ ಜಾಗ ಎಂದು ಇವರು ಭಾವಿಸಿಬಿಟ್ಟಿದ್ದಾರೆ. ಇಂತಹ ವಿವೇಚನೆಯಿಲ್ಲದ ವ್ಯಕ್ತಿ ರಂಗಾಯಣದ ನಿರ್ದೇಶಕರ ಸ್ಥಾನಕ್ಕೆ ಬಂದದ್ದು ದುರದೃಷ್ಟ ಸಂಗತಿ ಎಂದೇ ಹೇಳಬೇಕಾಗಿದೆ.
ಗಾಂಧಿ ವಿಚಾರ ಪರಿಷತ್ ಒಂದು ಸಾಮಾಜಿಕ ಕಳಕಳಿಯಿಂದ ಕಟ್ಟಿಕೊಂಡಿರುವ ಟ್ರಸ್ಟ್. ಆ ಟ್ರಸ್ಟ್‌ನ ಸಿ.ಎ. ನಿವೇಶನವಾಗಿ ನಿಗದಿತ ಅವಧಿಯವರೆಗೆ ಟ್ರಸ್ಟ್ ಕಾರ್ಯನಿರ್ವಹಿಸಲು ನೀಡಿರುವ ಜಾಗ ಅದು ಅಷ್ಟೆ. ಪ. ಮಲ್ಲೇಶ್ ಪೆಟ್ರೋಲ್ ಬಂಕ್ ನಿರ್ಮಿಸಲು ಅಲ್ಲ, ಅದು ಸರಕಾರದ ಆಸ್ತಿ ಸ್ವಾಮಿ.

ಅಡ್ಡಂಡ ಕಾರ್ಯಪ್ಪ
‘‘ಬಿಳಿ ಶರ್ಟು-ಬಿಳಿ ಪ್ಯಾಂಟು ಹಾಕಿಕೊಂಡು ಇದೇ ಸಮಾಜವಾದ ಎನ್ನುವವರು’’ ಎಂಬುದಾಗಿ ಉಲ್ಲೇಖಿಸಿ ಕೇವಲವಾಗಿ ಮಾತನಾಡಿರುವುದರಿಂದ ಅವರ ವ್ಯಕ್ತಿತ್ವಕ್ಕೇನು ಚ್ಯುತಿ ಆಗುವುದಿಲ್ಲ. ಅವರ ಬಿಳಿ ಬಟ್ಟೆಯಷ್ಟೇ ಶುಭ್ರವಾದ, ಶುಚಿತ್ವದ ಪ್ರಾಮಾಣಿಕ ಮನಸ್ಸಿನ ವ್ಯಕ್ತಿತ್ವ ಪ.ಮಲ್ಲೇಶ್ ಎಂಬುದನ್ನು ನಿಮ್ಮ ಬಿಜೆಪಿ, ಸಂಘಪರಿವಾರದವರನ್ನೇ ಕೇಳಿ ತಿಳಿದುಕೊಳ್ಳಿ.
ಅವರ ಆ ಬಿಳಿ ಬಟ್ಟೆ ಕನ್ನಡ ಭಾಷೆಯ, ಕರ್ನಾಟಕದ ಹೋರಾಟದ ಅಸ್ಮಿತೆ ಎಂಬುದನ್ನು ಕೇಳಿ ತಿಳಿದುಕೊಂಡರೆ ತಮ್ಮ ಜ್ಞಾನದ ಅರಿವು ವಿಸ್ತಾರವಾಗುತ್ತದೆ. ಕನ್ನಡ ಶಾಲೆಯನ್ನು ಕಟ್ಟಿ, ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ, ಕಾರ್ಮಿಕರ, ದಲಿತರ, ಅವಕಾಶ ವಂಚಿತರ ಪರ ಹೋರಾಟ ಮಾಡುತ್ತಾ ಬಂದಿರುವ ಅವರ ಸೇವೆ ಅವಿಸ್ಮರಣೀಯವಾದುದು.
ಒಂದು ಘಟನೆಯನ್ನು ನಾನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.
ನನ್ನ ಸ್ನೇಹಿತರೊಬ್ಬರು ಪ.ಮಲ್ಲೇಶ್ ಅವರ ಸಹಾಯವನ್ನು ಪಡೆದು ಕೃತಜ್ಞತೆ ಸಲ್ಲಿಸಲು ನಿರ್ಧರಿಸಿ ಒಂದು ಹಣ್ಣಿನ ಬುಟ್ಟಿಯನ್ನು ತೆಗೆುಕೊಂಡು ಅವರ ಮನೆಗೆ ಹೋಗಿ ಮಾತನಾಡಿಸಿ ಬರೋಣ ಎಂದು ನನ್ನನ್ನು ಕೇಳಿದರು. ನಾನು ‘ಅವರು ಅದನ್ನೆಲ್ಲಾ ಒಪ್ಪುವುದಿಲ್ಲ’ ಎಂದು ತಿಳಿಸಿದೆ. ಆದರೂ ಅವರು ‘ಹಣ್ಣುಗಳನ್ನು ಕೊಡುವುದು ತಾನೆ’ ಎಂದು ಹೇಳಿ ನನ್ನನ್ನು ಒತ್ತಾಯಿಸಿ ಪ.ಮಲ್ಲೇಶ್ ಅವರನ್ನು ಭೇಟಿಮಾಡಲು ಹೋಗಬೇಕಾಯಿತು. ಅವರ ಮನೆ ಗೇಟ್ ಬಳಿ ಕಾರು ನಿಲ್ಲಿಸಿದೆ. ಗೇಟ್ ಬಳಿಯೇ ಪ.ಮಲ್ಲೇಶ್ ಇದ್ದರು. ಹಣ್ಣಿನ ಬ್ಯಾಗನ್ನು ಕೈಗೆತ್ತಿಕೊಳ್ಳುವುದನ್ನು ನೋಡಿದರು. ‘ಏನದು? ಅಂದರು’. ’ಸರ್ ಇವರು ನಿಮ್ಮಿಂದ ಸಹಾಯ ಆಗಿರುವುದಕ್ಕೆ ಖುಷಿಯಿಂದ ಹಣ್ಣುಗಳನ್ನು ತಂದಿದ್ದಾರೆ, ನಿಮಗೆ ಕೊಡಲು’ ಎಂದು ಹೇಳಿದೆ. ‘ನನ್ನಿಂದ ಸಹಾಯ ಆಗಿದೆ ಎಂದು ತಾನೆ ಅವರು ಹಣ್ಣು ತಂದಿರುವುದು. ಆ ಉದ್ದೇಶದಿಂದ ತಂದಿದ್ದರೆ, ಅದನ್ನು ನಾನು ತೆಗೆದುಕೊಳ್ಳುವುದಿಲ್ಲ. ಅದನ್ನು ಕಾರಿನಲ್ಲೇ ಇಟ್ಟು ಬನ್ನಿ’, ಎಂದು ತರಗೊಡದೆ ನಿರಾಕರಿಸಿದರು. ಅಂತಹ ವ್ಯಕ್ತಿತ್ವ ಅವರದು.
ಎಷ್ಟೊಂದು ಸಹಾಯವನ್ನು ಸಮಾಜಮುಖಿಯಾಗಿ ಸಾರ್ವಜನಿಕರಿಗೆ ಮಾಡಿದ್ದಾರೆ. ಯಾರಿಂದಲೂ ಏನನ್ನೂ ಅಪೇಕ್ಷಿಸಿದವರಲ್ಲ. ಸನ್ಮಾನ, ಹಾರ, ತುರಾಯಿ ಯಾವುದನ್ನೂ ನಿರೀಕ್ಷಿಸಿದವರಲ್ಲ. ಸರಳ ಆದರ್ಶ ವ್ಯಕ್ತಿತ್ವದ, 90 ವರ್ಷದ ಕರ್ನಾಟಕ ಕಂಡ ಅಪರೂಪದ ಹೋರಾಟದ ಹಿರಿಯ ಜೀವ ನಮ್ಮಿಂದಿಗಿರುವುದೇ ಒಂದು ಸ್ಫೂರ್ತಿ. ಇಂತಹ ಚೇತನದ ಬಗ್ಗೆ ಕೇವಲವಾಗಿ ಮಾತನಾಡಿರುವುದನ್ನು ನೋಡಿದರೆ ‘‘ಹೂವಿಗೆ ಚರಂಡಿಯ ಸರ್ಟಿಫಿಕೇಟ್ ಬೇಕಿಲ್ಲ’’ ಎಂಬ ಕುವೆಂಪು ಅವರ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತಿದೆ.

ಪ. ಮಲ್ಲೇಶ್
ಜನ್ನಿಯವರ ಕುಟುಂಬದ ಬಗ್ಗೆ ಕಾರ್ಯಪ್ಪ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಜನ್ನಿಯವರ ಪತ್ನಿ ಸುಮತಿಯವರು ಕನ್ನಡ ರಂಗಭೂಮಿಯ ಹಿರಿಯ ಪ್ರತಿಭೆ, ಮಗ ಸಂಗೀತದ ಮೇರು ಗಾಯಕ ಇವರ ಪ್ರತಿಭೆಯನ್ನು ರಂಗಾಯಣದ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗಿದೆ ಅಷ್ಟೆ. ಅದನ್ನು ಕೆಟ್ಟದಾಗಿ ಬಿಂಬಿಸುವುದು ಮೂರ್ಖತನ.
ನಾಲಿಗೆ ಹಿಡಿತವಿಲ್ಲದೆ ಬಾಯಿಗೆ ಬಂದಂತೆ ಮನಸ್ಸಿಗೆ ಬಂದಂತೆ ಹೀಗೆ ಸುಳ್ಳು ಮಾತುಗಳನ್ನೇ, ಸತ್ಯಕ್ಕೆ ದೂರವಾದ ಮಾತುಗಳನ್ನೇ ಪದೇ ಪದೇ ಆಡುತ್ತಿರುವುದು ಇವರಿಗೆ ಶೋಭೆ ತರುವಂತಹದ್ದಲ್ಲ. ಪ. ಮಲ್ಲೇಶ ಅವರ ಬಗ್ಗೆ ಕೇವಲವಾಗಿ ಮಾತುಗಳನ್ನಾಡಿರುವುದಕ್ಕೆ ಈ ವ್ಯಕ್ತಿ ಕ್ಷಮೆಯಾಚಿಸಿದರೆ ರಂಗಾಯಣದ ನಿರ್ದೇಶಕರ ಸ್ಥಾನದ ಗೌರವ ಉಳಿದೀತು.







