ಬಿರ್ಭೂಮ್ ಹಿಂಸಾಚಾರ; ಯುಪಿ, ಗುಜರಾತ್ ಮತ್ತು ಇತರ ರಾಜ್ಯಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದಂತಹ ಹಿಂಸಾಚಾರಗಳು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಾಮಾನ್ಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಿರ್ಭೂಮ್ ಹತ್ಯಾಖಾಂಡವನ್ನು ಸಮರ್ಥಿಸುತ್ತಿಲ್ಲ. ಆದರೆ, ಇಂತಹ ಘಟನೆಗಳು ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಬಿಹಾರ್ ಮತ್ತು ರಾಜಸ್ಥಾನಗಳಲ್ಲಿ ಹೆಚ್ಚಾಗಿ ನಡೆಯುತ್ತದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಬಿರ್ಭೂಮ್ ಜಿಲ್ಲೆಯ ಬೋಗುತಿ ಗ್ರಾಮದಲ್ಲಿ ಟಿಎಂಸಿ ನಾಯಕನನ್ನು ನಾಲ್ವರು ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಬೆನ್ನಲ್ಲೇ ಗ್ರಾಮದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಕೊಲೆಯಾದ ಭದು ಶೇಕ್ ಅವರ ಬೆಂಬಲಿಗರು ಸೋಮವಾರ ರಾತ್ರಿ ಗ್ರಾಮದ ಹಲವು ಮನೆಗಳಿಗೆ ಪೆಟ್ರೋಲ್ ಬಾಂಬ್ ಎಸೆದು ದಾಂಧಲೆ ನಡೆಸಿದ್ದಾರೆ.
ಶೇಖ್ ಹತ್ಯೆಯ ಆರೋಪಿಗಳಿಬ್ಬರಿಗೆ ಸೇರಿದ ಮನೆ ಒಳಗೊಂಡಂತೆ ಹಲವಾರು ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಯಿತು. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಮನೆಯಿಂದ ಏಳು ಸುಟ್ಟ ಮೃತದೇಹಗಳು ಪತ್ತೆಯಾಗಿದ್ದು, ಒಬ್ಬರು ಜಿಲ್ಲೆಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು scroll.in ವರದಿ ಮಾಡಿದೆ.
ಬಿರ್ಭೂಮ್ ಹಿಂಸಾಚಾರದ ವಿರುದ್ಧ ಎಡಪಕ್ಷಗಳು ಹಾಗೂ ಬಿಜೆಪಿ ಆಡಳಿತರೂಢ ಟಿಎಂಸಿಯನ್ನು ತೀವ್ರ ಟೀಕಿಸಿದ್ದು, ಸಿಎಂ ಹುದ್ದೆಯಿಂದ ಬ್ಯಾನರ್ಜಿ ಕೆಳಗಿಳಿಯಬೇಕೆಂದು ಆಗ್ರಹಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳಿಂದ ಘಟನೆ ಬಗ್ಗೆ ತನಿಖೆ ನಡೆಸಲು ಬಿಜೆಪಿ ಒತ್ತಾಯಿಸಿದೆ.
ಆದರೆ ಘಟನೆ ಹಿಂದೆ ವಿರೋಧ ಪಕ್ಷಗಳ ಕೈವಾಡ ಇದೆಯೆಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. "ಸರ್ಕಾರ ನಮ್ಮದು, ನಮ್ಮ ರಾಜ್ಯದ ಜನರ ಬಗ್ಗೆ ನಮಗೆ ಕಾಳಜಿ ಇದೆ. ಯಾರಾದರೂ ತೊಂದರೆಗೊಳಗಾಗುವುದನ್ನು ನಾವು ಎಂದಿಗೂ ಬಯಸುವುದಿಲ್ಲ. ಬಿರ್ಭೂಮ್ ರಾಂಪುರ್ಹತ್ ಘಟನೆ ದುರದೃಷ್ಟಕರ. ನಾನು ತಕ್ಷಣವೇ ಪ್ರಭಾರ ಅಧಿಕಾರಿ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅವರನ್ನು ವಜಾಗೊಳಿಸಿದ್ದೇನೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಹತ್ರಾಸ್ ಸಾಮೂಹಿಕ ಅತ್ಯಾಚಾರವನ್ನು ಪ್ರಸ್ತಾಪಿಸಿದ ಬ್ಯಾನರ್ಜಿ, ಆದಿತ್ಯನಾಥ್ ಸರ್ಕಾರವು ತೃಣಮೂಲ ಕಾಂಗ್ರೆಸ್ ನಿಯೋಗವನ್ನು ಹತ್ರಾಸ್ ಘಟನೆ ನಡೆದ ಜಿಲ್ಲೆಗೆ ಪ್ರವೇಶಿಸಲು ಮತ್ತು ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಅನುಮತಿಸಲಿಲ್ಲ. ಆದರೆ, ಬಿರ್ಭೂಮ್ ಜಿಲ್ಲೆಗೆ ಭೇಟಿ ನೀಡುವುದನ್ನು ತನ್ನ ಸರ್ಕಾರ ತಡೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ
"ಇದು ಬಂಗಾಳ, ಉತ್ತರ ಪ್ರದೇಶ ಅಲ್ಲ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಅಂಗಡಿಯೊಂದರ ಸಮೀಪ ನಿಂತಿದ್ದ ಪಂಚಾಯತ್ ಉಪಾಧ್ಯಕ್ಷ ಭಡು ಶೇಖ್ ಅವರನ್ನು, ಬೈಕ್ನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಕಚ್ಚಾ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿದ್ದು, ಕನಿಷ್ಟ 12 ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿದೆ. ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸುಮಾರು 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯವನ್ನು ಕೇಳಿದೆ.
ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಹೈಕೋರ್ಟ್, ಘಟನೆಗೆ ಸಂಬಂಧಪಟ್ಟಂತೆ ಒಂದೂ ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ ಎಂದು ಹೇಳಿದೆ. ಯಾವುದೇ ರೀತಿಯ ವಿಳಂಬ ಮಾಡದೆ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ, ವಿಧಿವಿಜ್ಞಾನ ಪರೀಕ್ಷೆಗೆ ಬೇಕಾದ ವಸ್ತುಗಳ ಸಂಗ್ರಹ ಮಾಡಲು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸೂಚನೆ ನೀಡಿದೆ. ಅಲ್ಲದೆ, ಸಾಕ್ಷ್ಯನಾಶ ಆಗಬಾರದೆಂದು ಸಿಸಿಟಿವಿ ಅಳವಡಿಸಲು ಕೂಡಾ ನಿರ್ದೇಶಿಸಿದೆ.







