ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧ್ಯಂತರ ಪರಿಹಾರ ಪಾವತಿ ಕಡ್ಡಾಯವಲ್ಲ: ಹೈಕೋರ್ಟ್

ಬೆಂಗಳೂರು, ಮಾ.23: ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಾಲ ಪಡೆದ ಮೊತ್ತದ ಪೈಕಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ತಮಗೆ ಸೂಚಿಸಿ ಯಲಬುರ್ಗಾ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಕೊಪ್ಪಳದ ಕುಷ್ಟಗಿ ನಿವಾಸಿ ವಿಜಯಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಚೆಕ್ ಬೌನ್ಸ್ ಪ್ರಕರಣದಲ್ಲಿ ದೂರುದಾರರಿಗೆ(ಸಾಲ ನೀಡಿದವರು) ಮಧ್ಯಂತರ ಪರಿಹಾರ ಪಾವತಿಸುವಂತೆ ಆರೋಪಿಗೆ(ಸಾಲ ಪಡೆದವರು) ಆದೇಶಿಸುವ ವಿವೇಚನಾಧಿಕಾರವನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಹೊಂದಿದೆ. ಆದರೆ, ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸುವುದು ಕಡ್ಡಾಯವೇನಲ್ಲ. ಒಂದೊಮ್ಮೆ ಮಧ್ಯಂತರ ಪರಿಹಾರ ಪಾವತಿಗೆ ಆದೇಶಿಸಲು ಮುಂದಾದರೆ, ಅದಕ್ಕೆ ಸೂಕ್ತ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಬೇಕಾಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣದಲ್ಲಿ ಆರೋಪಿ ತಾನು ದೋಷಿ ಎಂದು ಒಪ್ಪಿಕೊಂಡಿಲ್ಲ. ಮತ್ತೊಂದೆಡೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಆರೋಪಿಯನ್ನು ಸಾಲ ಮರು ಪಾವತಿಗೆ ಹೊಣೆಗಾರರನ್ನಾಗಿ ಮಾಡಿಲ್ಲ. ಹೀಗಿದ್ದೂ ದೂರುದಾರ ಶೇಖರಪ್ಪ ಅವರಿಂದ ಪಡೆದ ಎರಡು ಕೋಟಿ ರೂ. ಸಾಲದಲ್ಲಿ ಶೇ.20ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಮಾಡಬೇಕು ಎಂದು ಆರೋಪಿತರಿಗೆ ಜೆಎಂಎಫ್‍ಸಿ ಕೋರ್ಟ್ ಆದೇಶಿಸಲು ಸಕಾರಣಗಳನ್ನು ಉಲ್ಲೇಖಿಸಿಲ್ಲ. ಹೀಗಾಗಿ, ಈ ಆದೇಶ ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೇನು: 2020ರ ಡಿಸೆಂಬರ್‍ನಲ್ಲಿ ವ್ಯಾಪಾರ ನಿಮಿತ್ತ ವಿಜಯಾ ಎಂಬುವರು ಶೇಖರಪ್ಪ ಎಂಬುವರಿಂದ ಎರಡು ಕೋಟಿ ರೂಪಾಯಿ ನಗದನ್ನು ಸಾಲವಾಗಿ ಪಡೆದಿದ್ದು, ಭದ್ರತಾ ಖಾತರಿಯಾಗಿ ಎರಡು ಚೆಕ್ ನೀಡಿದ್ದರು ಎನ್ನಲಾಗಿದೆ. ಆದರೆ, ನಿಗದಿತ ಅವಧಿಯಲ್ಲಿ ಹಣ ನೀಡದಿದ್ದಾಗ ಶೇಖರಪ್ಪ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಯಲಬುರ್ಗಾ ಜೆಎಂಎಫ್‍ಸಿ ನ್ಯಾಯಾಲಯವು 2021ರ ಜೂ.1ರಂದು ಸಾಲದ ಹಣದ ಪೈಕಿ ಶೇ.20ರಷ್ಟು ಅಂದರೆ 40ಲಕ್ಷ ರೂ.ಗಳನ್ನು ಮಧ್ಯಂತರ ಪರಿಹಾರವಾಗಿ ಪಾವತಿಸಲು ವಿಜಯಾ ಎಂಬುವರಿಗೆ ಆದೇಶಿಸಿತ್ತು.







