ಕರ್ನಾಟಕದ ಹಳೆಯ ಸಿನೆಮಾಗಳ ಡಿಜಿಟಲೀಕರಣ; ಸರಕಾರಕ್ಕೆ ಅನುದಾನಕ್ಕೆ ಪ್ರಸ್ತಾವ: ಅಶೋಕ್ ಕಶ್ಯಪ್

ಉಡುಪಿ : ಪೂನಾದಲ್ಲಿರುವ ನ್ಯಾಶನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಮಾದರಿಯಲ್ಲಿ ಕರ್ನಾಟಕದ ಎಲ್ಲ ಹಳೆಯ ಸಿನೆಮಾಗಳನ್ನು ಡಿಜಿಟಲೀಕರಣ ಮಾಡಿ ಸಂಗ್ರಹಿಸಿ ಇಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ ರಾಜ್ಯ ಸರಕಾರದಕ್ಕೆ ಎಂಟು ಕೋಟಿ ರೂ. ಪ್ರಸ್ತಾವ ಕಳುಹಿಸಲಾಗಿದೆ ಎಂದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಹಾಗೂ ಚಲನಚಿತ್ರ ನಿರ್ದೇಶಕ ಅಶೋಕ್ ಕಶ್ಯಪ್ ತಿಳಿಸಿದ್ದಾರೆ.
ಮಣಿಪಾಲದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಅಕಾಡೆಮಿಯ ತಂಡವೊಂದು ಪೂನಾಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ ಬಂದಿದೆ. ಕರ್ನಾಟಕದ ಮೂಕಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಪ್ರಾದೇಶಿಕ ಸೇರಿದಂತೆ ಎಲ್ಲ ಹಳೆಯ ಸಿನೆಮಾಗಳನ್ನು ಒಂದೇ ಕಡೆಗಳಲ್ಲಿ ಸುರಕ್ಷಿತವಾಗಿ ಕಾಪಾಡುವ ನಿಟ್ಟಿನಲ್ಲಿ ಸ್ಕ್ಯಾನರ್, ಕೋಲ್ಡ್ ವೊಲ್ಟ್, ಡಿಜಿಟೈಸ್, ಕಲರೈಸ್ ಯಂತ್ರಗಳನ್ನು ಖರೀದಿಸಬೇಕಾಗಿದೆ. ಮೊದಲ ಆದ್ಯತೆ ಯಲ್ಲಿ ಈ ಕಾರ್ಯವನ್ನು ಮಾಡಲಾಗುವುದು ಮುಂದಿನ ಜನಾಂಗ ಸಿನೆಮಾ ಕುರಿತು ಅಧ್ಯಯನ ನಡೆಸಲು ಬಹಳಷ್ಟು ಅನುಕೂಲವಾಗುತ್ತದೆ ಎಂದರು.
ವಿಫುಲ ಉದ್ಯೋಗವಕಾಶ
ಭಾರತದ ಚಲನಚಿತ್ರ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶಗಳಿದ್ದು, ಪ್ರತಿ ವರ್ಷ ೧೦೦೦೦ರಿಂದ ೨೦೦೦೦ದ ವರೆಗೆ ಚಲನಚಿತ್ರ ಕ್ಷೇತ್ರದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಅವಶ್ಯಕತೆ ಇದೆ. ಆದುದರಿಂದ ಚಲನಚಿತ್ರಕ್ಕೆ ಸಂಬಂಧಿಸಿ ಹೆಚ್ಚು ಹೆಚ್ಚು ಸಂಸ್ಥೆಗಳು ಸ್ಥಾಪನೆಯಾಗಬೇಕಾಗಿವೆ ಎಂದು ಅಶೋಕ್ ಕಶ್ಯಪ್ ಹೇಳಿದರು.
ಹಾಲಿವುಡ್ ಸಿನೆಮಾಗಳ ವಿಎಫ್‌ಎಕ್ಸ್, ಆ್ಯನಿಮೆಟೆಡ್, ಸಿನೆಮಾ ಗ್ರಾಫಿಕ್ಸ್, ಫೋಟೋ ರಿಯಲಿಸ್ಟಿಕ್ಸ್‌ಗಳನ್ನು ಭಾರತದಲ್ಲಿ ಮಾಡಲಾಗುತ್ತದೆ. ಆದುದರಿಂದ ಇದರಲ್ಲಿ ಪರಿಣಿತರಿಗೆ ಹೆಚ್ಚಿನ ಬೇಡಿಕೆಗಳು ಕೂಡ ಇವೆ. ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ನೂರಾರು ವಿವಿ ಸ್ಥಾಪಿಸಿದರೂ ನೀಡಲು ಸಾಧ್ಯ ವಿಲ್ಲ. ಈ ಸಂಬಂಧ ಬೆಂಗಳೂರಿನಲ್ಲಿರುವ ಮೂರು ಕಂಪೆನಿಯಲ್ಲಿ ೧೦೦೦೦ ಕೆಲಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಫಿಲ್ಮ್ ಸ್ಕೂಲ್‌ಗಳು, ಸಿನೆಮಾಗೆ ಸಂಬಂಧಿ ಇನ್‌ಸ್ಟಿಟ್ಯೂಟ್‌ಗಳು ಬರಬೇಕಾಗಿವೆ ಎಂದರು.
ಮೈಸೂರಿನಲ್ಲಿ ಫಿಲ್ಮ್ ಸಿಟಿ
ಮೈಸೂರಿನಲ್ಲಿ ಸಿನಿ ವಿಶ್ವವಿದ್ಯಾಲಯವನ್ನು ಒಳಗೊಂಡ ಪಿಲ್ಮ್ ಸಿಟಿ ಸ್ಥಾಪಿಸುವ ಯೋಜನೆ ನಮ್ಮ ಮುಂದೆ ಇದೆ. ಸಿನೆಮಾಗಳಿಗೆ ಸಂಬಂಧಿಸಿದ ವರ್ಕ್ ಲೋಡ್ ನಮ್ಮಲ್ಲಿ ಜಾಸ್ತಿ ಆಗುತ್ತಿದೆ. ಹೊಸ ರಾಜ್ಯ ಮಾತ್ರವಲ್ಲ ಹೊರ ದೇಶಗಳಿಂದ ಕೆಲಸ ಗಳು ಬರುತ್ತಿವೆ. ಅದಕ್ಕಾಗಿ ನಮಗೆ ವಿವಿಯ ಅಗತ್ಯವಿದೆ. ಕಲಿಯಲು ಸಾಕಷ್ಟು ಮಂದಿ ಆಸಕ್ತರು ಇದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸರಕಾರದಿಂದ ಕನ್ನಡದಲ್ಲೂ ಕೂಡ ಓಟಿಟಿ ಆರಂಭಿಸುವ ಅಗತ್ಯವಿದೆ. ಚಲನ ಚಿತ್ರ ಇಂಡಸ್ಟ್ರಿಯ ಪರಿಣಿತರು ಈ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆಸ ಬೇಕು. ಓಟಿಟಿ ಮೂಲಕ ಆದಾಯ, ಮನರಂಜನೆ, ಶಿಕ್ಷಣವನ್ನು ಕೊಡಲು ಸಾಧ್ಯವಾಗುತ್ತದೆ. ಅಕಾಡೆಮಿ ಕೂಡ ಈ ಕುರಿತು ಮುಂದಿನ ದಿನಗಳಲ್ಲಿ ಚಿಂತನೆ ಮಾಡಲಿದೆ ಎಂದು ಅವರು ತಿಳಿಸಿದರು.







