ಸಾಮಾಜಿಕ ಕಾರ್ಯಕರ್ತ ಶೇಖ್ ಶರ್ಫುದ್ದೀನ್ ದಾವೂದ್ ನಿಧನ
ಉಡುಪಿ : ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಶೇಖ್ ಶರ್ಫುದ್ದೀನ್ ದಾವೂದ್(75) ಇಂದು ಬೆಳಗ್ಗೆ ಬೆಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ತನ್ನ ಜೀವನದುದ್ದಕ್ಕೂ ಉಡುಪಿಯ ವಿವಿಧ ಸಾಮಾಜಿಕ, ಸಾಮುದಾಯಿಕ ಸಂಘ ಸಂಸ್ಥೆಗಳ ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿದ್ದರು. ೮೦ದಶಕದ ಆರಂಭದಲ್ಲಿ ಉಡುಪಿಯಲ್ಲಿ ಅಸ್ಥಿತ್ವಕ್ಕೆ ಬಂದ ಬಡ್ಡಿ ರಹಿತ ಹಣಕಾಸು ವ್ಯವಹಾರ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು ೨೫ ವರ್ಷಗಳ ಕಾಲ ಈ ಸಂಸ್ಥೆಯ ಕೋಶಾಧಿಕಾರಿಯಾಗಿದ್ದರು.
ಮುಂದೆ ಈ ಸಂಸ್ಥೆ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೊಪರೇಟಿವ್ ಸೊಸೈಟಿ ಎಂಬುದಾಗಿ ಪರಿವರ್ತನೆಗೊಂಡ ಬಳಿಕವೂ ಅವರು ತನ್ನ ಕೊನೆಯ ದಿನಗಳ ತನಕ ಸೇವೆ ನೀಡಿದರು. ಉಡುಪಿ ಜಾಮಿಯ ಮಸೀದಿಯ ಮಸೀದಿಯ ಕೋಶಾಧಿಕಾರಿಯಾಗಿ ಆಡಳಿತ ಮಂಡಳಿಯ ಸದಸ್ಯರಾಗಿ ಸುಮಾರು ನಲವತ್ತು ವರ್ಷಗಳ ಕಾಲ ಸೇವೆ ನೀಡಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ನಗರ ವರ್ತುಲ, ಮಾನವೀಯ ಸೇವೆ ಮತ್ತು ಪರಿಹಾರ ಸಂಸ್ಥೆ ಎಚ್.ಆರ್.ಎಸ್‌ನ ರಾಜ್ಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್‌ನ ಸ್ಥಾಪಕ ಸದಸ್ಯರಾಗಿ ಸಕ್ರಿಯ ಸೇವೆ ನೀಡಿದ್ದರು.
ಮೃತರು ಪತ್ನಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಿಲಾಲ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.