ಅಧಿಕಾರಿಗಳ ಕರ್ತವ್ಯಲೋಪ ವಿರೋಧಿಸಿ ಕೆದೂರು ಗ್ರಾಮಸ್ಥರಿಂದ ಧರಣಿ
‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ವಿರುದ್ಧ ಆಕ್ರೋಶ

ಕುಂದಾಪುರ : ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೆದೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ನೀಡಲಾದ ಮನವಿಗಳಿಗೆ ಗಮನ ನೀಡದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಕೆದೂರು ಗ್ರಾಪಂ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಬುಧವಾರ ಕುಂದಾಪುರ ತಾಪಂ ಕಚೇರಿ ಎದುರು ಧರಣಿ ನಡೆಸಿದರು.
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮ ನಮ್ಮೂರಿನ ಪಾಲಿಗೆ ಕೇವಲ ಒಂದು ನಾಟಕ. ಗ್ರಾಪಂ ನಿರ್ಣಯಗಳಿಗೆ ಅಧಿಕಾರಿಗಳು ಕಿಂಚಿತ್ ಬೆಲೆ ನೀಡುತ್ತಿಲ್ಲ. ಮೂರು ವರ್ಷಗಳಿಂದ ಗ್ರಾಪಂ ಕಟ್ಟಡದ ಬಾಡಿಗೆ ನೀಡದ ಬಾಡಿಗೆದಾರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟರಾಗಿ ದ್ದಾರೆ. ಸರಕಾರಿ ಪ್ರೌಢಶಾಲೆಯ ಸ್ಥಳ ಅಕ್ರಮ ಮಾಡಿರುವುದರ ವಿರುದ್ಧ ಯಾವುದೇ ಕ್ರಮ ಜರಗಿಸುತ್ತಿಲ್ಲ ಎಂದು ಧರಣಿ ನಿರತರು ಆರೋಪಿಸಿದರು.
ಕಳೆದ ಎರಡು ವರ್ಷಗಳ ಕ್ರಿಯಾ ಯೋಜನೆ, ನರೇಗಾ ಕಾರ್ಯಕ್ರಮದಡಿ ಲೋಪ ದೋಷಗಳನ್ನು ಮಾಡಲಾಗಿದೆ. ಗ್ರಾಪಂನಲ್ಲಿ ಅಧಿಕಾರಿಗಳಿಂದ ಅವ್ಯವಹಾರಗಳು ನಡೆಯುತ್ತಿವೆ. ಗ್ರಾಮ ಸಭೆಗೆ ಗೈರುಹಾಜರಾಗಿ ರುವ ಅಧಿಕಾರಿ ಗಳ ಬಗ್ಗೆ, ಗ್ರಾಪಂ ಕಚೇರಿಗೆ ಸರಿಯಾಗಿ ಹಾಜರಾಗದ ಅಧಿಕಾರಿಗಳ ಬಗ್ಗೆ ಹಾಗೂ ಕೆದೂರಿನ ನಾಗರಿಕರಿಗೆ ದೊರಕಬೇಕಾದ ಸರಕಾರದ ಸೌಲಭ್ಯದಿಂದ ವಂಚಿತರನ್ನಾಗಿಸಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಅವರಿಗೆ ಮನವಿ ಸಲ್ಲಿಸಿ, ಕೆದೂರು ಗ್ರಾಪಂ ಅಧಿಕಾರಿಗಳ ಕರ್ತವ್ಯಲೋಪದ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಪಿಡಿಓ ಬದಲಾವಣೆ ಮಾಡಬೇಕು ಎಂದು ಆಗ್ರಹಿಸ ಲಾಯಿತು. ಎ.೧೫ರೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಬಳಿಕ ಧರಣಿ ಹಿಂತೆಗೆದುಕೊಳ್ಳಲಾಯಿತು.
ಧರಣಿಯಲ್ಲಿ ಕೆದೂರು ಗ್ರಾಪಂ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಭುಜಂಗ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಗುಬ್ಬಿ, ಜಲಜಾ, ವಿಜಯ ಶೆಟ್ಟಿ, ಉಲ್ಲಾಸ್ ಹೆಗ್ಡೆ, ಜ್ಯೋತಿ, ಸ್ಥಳೀಯರಾದ ಧರ್ಮರಾಜ್ ಮೊದಲಿಯಾರ್, ಶಾರದಾ, ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ʼʼಪ್ರಜಾಪ್ರಭುತ್ವದ ಬುನಾದಿ ಗ್ರಾಪಂ. ಇಲ್ಲಿನ ಆಡಳಿತ ಹದಗೆಟ್ಟರೆ, ನ್ಯಾಯ, ಕಾನೂನು ಹಾಗೂ ಸಾಮಾಜಿಕ ಭದ್ರತೆ ಮುರಿದು ಬಿದ್ದರೆ, ಜನ ಯಾವ ಸರಕಾರ, ಆಡಳಿತ, ಕಾನೂನನ್ನು ನಂಬುವುದಿಲ್ಲ. ಗೂಂಡಾ ರಾಜ್ಯಗಳಿಗೆ ಇದೇ ಕಾರಣವಾಗುತ್ತದೆʼʼ.
-ಕೆ.ಸೀತಾರಾಮ ಶೆಟ್ಟಿ, ನಿವೃತ್ತ ಶಿಕ್ಷಣಾಧಿಕಾರಿ(ಗ್ರಾಮಸ್ಥರು)