ಮಾ.25: ಅಂಬಲಪಾಡಿ ವಿದ್ಯಾಸಮುದ್ರ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ನೂತನ ಶಾಲಾ ಕಟ್ಟಡ ಉದ್ಘಾಟನೆ
ಉಡುಪಿ : ಉಡುಪಿ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದ ಅಧ್ಯಕ್ಷತೆಯ ಅಂಬಲಪಾಡಿ ಸಮಾಜ ಶಿಕ್ಷಣ ಸಂಸ್ಥೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಂಬಲಪಾಡಿ ವಿದ್ಯಾಸಮುದ್ರ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ನೂತನ ಶಾಲಾ ಕಟ್ಟಡ ಮಾ.೨೫ರ ಶುಕ್ರವಾರ ಉದ್ಘಾಟನೆಗೊಳ್ಳಲಿದೆ.
ಶ್ರೀವಿದ್ಯಾವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಮಾ.25ರ ಸಂಜೆ 4ಕ್ಕೆ ಶಾಲಾ ಕಟ್ಟಡದ ನೆಲ ಅಂತಸ್ತನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಹಾಗೂ ಅಂಬಲಪಾಡಿಯ ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಂಬಲಪಾಡಿ ಸಮಾಜ ಶಿಕ್ಷಣ ಸಂಸ್ಥೆಯ ಸಂಚಾಲಕ ಹಾಗೂ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಆಚಾರ್ಯ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಣಿಯೂರು ಮಠದಕ್ಕೆ ಸೇರಿದ ಕಿದಿಯೂರು ಗ್ರಾಮದಲ್ಲಿದ್ದ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಶಾಲೆಗೆ ಆರು ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡದ ನಿರ್ಮಾಣ ನಡೆಯುತಿದ್ದು, ಇದೀಗ ಪೂರ್ಣಗೊಂಡ ನೆಲ ಅಂತಸ್ತನ್ನು ಉದ್ಘಾಟನೆ ಶುಕ್ರವಾರ ನಡೆಯಲಿದೆ. ಕಟ್ಟಡ ಮೊದಲ ಮತ್ತು ಎರಡನೇ ಅಂತಸ್ತುಗಳ ನಿರ್ಮಾಣವೂ ನಿಗದಿಯಾದ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದವರು ನುಡಿದರು.
ಪರಿಸರದ ಮಧ್ಯಮ ಮತ್ತು ಕೆಳವರ್ಗದ ಮಕ್ಕಳಿಗೆ ಗುಣಮಟ್ಟದ ಇಂಗ್ಲೀಷ್ ಮಾಧ್ಯಮ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ೨೦೧೬-೧೭ನೇ ಸಾಲಿನಿಂದ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕೆ ಮೊದಲು ಹಲವು ದಶಕಗಳ ಕಾಲ ಇದ್ದ ಕನ್ನಡ ಮಾಧ್ಯಮ ಶಾಲೆ ಮಕ್ಕಳ ಕೊರತೆಯಿಂದ ಮುಚ್ಚುವ ಸನ್ನಿವೇಶ ಎದುರಾದಾಗ ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ಪ್ರಾರಂಭಿಸಲಾಯಿತು. ಇದೀಗ ಪ್ರಿಪ್ರೈಮರಿಯಿಂದ ತರಗತಿಗಳು ನಡೆಯುತ್ತಿವೆ ಎಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಸರ್ವಜ್ಞ ಬನ್ನಂಜೆ, ಜಂಟಿ ಕಾರ್ಯದರ್ಶಿಗಳಾದ ಭಾಸ್ಕರ ರಾವ್ ಕಿದಿಯೂರು ಹಾಗೂ ರಾಜಾರಾಮ್ ರಾವ್ ಕೆ., ಸದಸ್ಯರಾದ ಅಜಿತ್‌ಕುಮಾರ್, ಡಾ.ಮೋಹನದಾಸ ಭಟ್, ನಾರಾಯಣ ಆಚಾರ್ಯ ಉಪಸ್ಥಿತರಿದ್ದರು.