ಅಂತ್ಯ ಸಂಸ್ಕಾರ ಸಹಾಯಧನ ಸ್ಥಗಿತಕ್ಕೆ ಮಂಜುನಾಥ ಭಂಡಾರಿ ಆಕ್ರೋಶ
ಮಂಗಳೂರು : ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆ ನೀಡುವ ಸಹಾಯ ನಿಧಿ ಯೋಜನೆಯನ್ನು ಸರಕಾರ ಸದ್ದಿಲ್ಲದೆ ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸು ಮಂಜುನಾಥ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು.
ಮೇಲ್ಮನೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ೨೦೦೬ರಲ್ಲಿ ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆ ಆರಂಭಿಸಲಾಗಿತ್ತು. ಬಡತನ ರೇಖೆಗಿಂತ ಕೆಳಗಿನವರು ಮೃತಪಟ್ಟರೆ, ಅಂತಹವರ ಅಂತ್ಯಕ್ರಿಯೆಗೆ ಸರಕಾರವು ಐದು ಸಾವಿರ ರೂ ನೀಡುತ್ತದೆ. ಆದರೆ ಈ ಹಣ ಮೃತಪಟ್ಟವರ ತಿಥಿ ಮುಗಿದರೂ ಕೈ ಸೇರುತ್ತಿಲ್ಲ. ಒಂದೆಡೆ ಈ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಮತ್ತೊಂದೆಡೆ ಯೋಜನೆಯಡಿ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಲಾಗಿದೆ. ಇದರೊಂದಿಗೆ ಸದ್ದಿಲ್ಲದೆ ಯೋಜನೆ ಸ್ಥಗಿತಗೊಳಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಮಾಹಿತಿ ಪ್ರಕಾರ ಆಸ್ಟ್ ಬಳಿಕ ಅರ್ಜಿ ಸ್ವೀಕರಿಸಿಲ್ಲ. ಅದಕ್ಕಿಂತ ಹಿಂದೆ ಅರ್ಜಿ ಸಲ್ಲಿಸಿರುವವರಿಗೆ ವಿಳಂಬವಾಗಿ ಸಹಾಯನಿಧಿ ದೊರೆಯುತ್ತಿದೆ. ಪ್ರಸ್ತುತ ಸಾಫ್ಟ್‌ವೇರ್‌ನಲ್ಲಿ ಅರ್ಜಿ ಸ್ವೀಕರಿಸುವ ಆಯ್ಕೆಯೇ ಸ್ಥಗಿತ ಗೊಂಡಿದೆ ಎಂದು ಬಂಟ್ವಾಳ ತಾಲೂಕು ಕಚೇರಿಯೇ ತಿಳಿಸಿದೆ. ಪ್ರವೀಣ್ ಎಸ್. ಎಂಬವರು ತನ್ನ ತಾಯಿ ಮೃತಪಟ್ಟಾಗ ಅಂತ್ಯಸಂಸ್ಕಾರ ಯೋಜನೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಗ್ರಾಮಕರಣಿಕರ ಕಚೇರಿಗೆ ತೆರಳಿ ವಿಚಾರಿಸಿದಾಗ ಆ ಯೋಜನೆ ಈಗ ಇಲ್ಲ. ಕೊರೋನ ಬಳಿಕ ನಿಲ್ಲಿಸಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು ಎಂಬುದನ್ನು ಮಂಜುನಾಥ ಭಂಡಾರಿ ಸದನದಲ್ಲಿ ಉಲ್ಲೇಖಿಸಿದರು.