ಅತ್ಯಾಚಾರ ಪ್ರಕರಣದಲ್ಲಿ ಪತಿಗೆ ವಿನಾಯಿತಿ ಬೇಡ, ಶಾಸಕಾಂಗ ಚಿಂತನೆ ನಡೆಸಲಿ: ಹೈಕೋರ್ಟ್ ಮೌಖಿಕ ಅಭಿಪ್ರಾಯ

ಬೆಂಗಳೂರು, ಮಾ.23: ಪತ್ನಿಯ ಮೇಲೆ ಅತ್ಯಾಚಾರ ನಡೆಸುವ ಪತಿಗೆ ವಿನಾಯಿತಿ ನೀಡಬಾರದು, ಈ ಬಗ್ಗೆ ಶಾಸಕಾಂಗ ಚಿಂತನೆ ನಡೆಸಲಿ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯಪಟ್ಟಿದೆ. ಅಲ್ಲದೆ, ವಿವಾಹ ಪತ್ನಿಯ ಮೇಲೆ ದೌರ್ಜನ್ಯವೆಸಗಲು ನೀಡುವ ಅನುಮತಿಯೂ ಅಲ್ಲ ಎಂದು ಹೇಳಿದೆ.
ಲೈಂಗಿಕ ಗುಲಾಮಳಂತೆ ತನ್ನನ್ನು ಬಳಸಿಕೊಂಡಿದ್ದಾಗಿ ಪತಿಯ ವಿರುದ್ಧ ಒಡಿಸ್ಸಾ ಮೂಲದ ಮಹಿಳೆ ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ಕೈಬಿಡಲು ವಿಚಾರಣಾ ನ್ಯಾಯಾಲಯ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಓಡಿಸಾ ಮೂಲದ ಪತಿ ಅತ್ಯಾಚಾರ ಆರೋಪ ಪ್ರಕರಣವನ್ನು ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಕೀಲರ ವಾದವನ್ನು ಆಲಿಸಿ ಪತ್ನಿಯ ಮೇಲೆ ಅತ್ಯಾಚಾರ ನಡೆಸುವ ಪತಿಗೆ ವಿನಾಯಿತಿ ನೀಡಬಾರದು, ಈ ಬಗ್ಗೆ ಶಾಸಕಾಂಗ ಚಿಂತನೆ ನಡೆಸಲಿ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣ ವಿವರ: ಒಡಿಸ್ಸಾ ಮೂಲದ ದಂಪತಿ ಬೆಂಗಳೂರಿನ ಸರ್ಜಾಪುರದಲ್ಲಿ ವಾಸವಾಗಿದ್ದರು. 43 ವರ್ಷದ ಪತಿ 27 ವರ್ಷದ ತನ್ನ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಲೈಂಗಿಕ ಗುಲಾಮಳಂತೆ ತನ್ನನ್ನು ಬಳಸಿಕೊಂಡಿದ್ದಾಗಿ ಪತಿಯ ವಿರುದ್ಧವೇ ಆಕೆ ಆರೋಪ ಮಾಡಿದ್ದರು. ಜತೆಗೆ, ನನ್ನ ಅಪ್ರಾಪ್ತ ಮಗಳ ಮೇಲೂ ಪತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಬೆಂಗಳೂರು ಪೂರ್ವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರರ ಪರ ವಕೀಲರು, ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂಬ ವಾದ ಮಂಡಿಸಿದ್ದರು. ಆದರೂ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ಪತಿಯ ವಿರುದ್ಧವೂ ಅತ್ಯಾಚಾರ ಪ್ರಕರಣವನ್ನು ಪರಿಗಣಿಸಬೇಕು. ಪತಿಯ ಕೃತ್ಯದಿಂದ ಪತ್ನಿಯ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಪರಿಣಾಮ ಬೀರುತ್ತದೆ.
ಈ ತೊಳಲಾಟಗಳ ಸಮ್ಮುಖದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಪತಿಗಿರುವ ವಿನಾಯಿತಿ ರದ್ದು ಮಾಡುವುದೇ ಸೂಕ್ತವಾದೀತು. ಶಾಸಕಾಂಗ ಈ ಬಗ್ಗೆ ಚಿಂತನೆ ನಡೆಸಬೇಕು. ಅಮೆರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಕೆಲ ದೇಶಗಳಲ್ಲಿ ಇದು ಅಪರಾಧ. ಗಂಡನು ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವೇ. ಅತ್ಯಾಚಾರ ವಿಚಾರದಲ್ಲಿ ಮಹಿಳೆ, ಪತ್ನಿಯ ನಡುವೆ ತಾರತಮ್ಯ ಸರಿಯಲ್ಲ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.







