ಟೋಲ್ ಗೇಟ್ ತೆರವಿಗೆ ದಿನಾಂಕ ನಿಗದಿ ಪಡಿಸಲಿ: ಹೋರಾಟ ಸಮಿತಿ ಆಗ್ರಹ
ಮಂಗಳೂರು : ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ಸಿಕ್ಕಿದ ಜನಬೆಂಬಲದಿಂದ ಶಾಸಕ ಡಾ. ಭರತ್ ಶೆಟ್ಟಿ ವಿಚಲಿರಾಗಿದ್ದಾರೆ. ಸುಳ್ಳು ಆರೋಪ, ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸಲು ಹತಾಷ ಯತ್ನ ಮಾಡಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆರೋಪಿಸಿದ್ದು, ಶಾಸಕರಿಗೆ ಪ್ರಾಮಣಿಕತೆ ಇದ್ದರೆ ಬಹಿರಂಗ ಚರ್ಚೆಗೆ ಬರಲಿ, ಆರೋಪಗಳಿಗೆ ಸಾಕ್ಷ್ಯ ಒದಗಿಸಲಿ ಎಂದು ಸುರತ್ಕಲ್ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟನೆ ನೀಡಿರುವ ಅವರು, ಟೋಲ್ ಗೇಟ್ ಚಲೋ ಪಾದಯಾತ್ರೆ ಯಶಸ್ವಿ ಸಮಾರೋಪಗೊಂಡ ತಕ್ಷಣವೆ ಶಾಸಕ ಭರತ್ ಶೆಟ್ಟಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಹಲವು ಆರೋಪಗಳನ್ನು ಮಾಡಿದ್ದಾರೆ. ಶಾಸಕರು ಆರೋಪಿಸಿದಂತೆ ಸುರತ್ಕಲ್ ಟೋಲ್ ಕೇಂದ್ರ ಆರಂಭಗೊಂಡಿರುವುದು 2013 ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ ಅಲ್ಲ. 2015 ಡಿಸೆಂಬರ್ ನಲ್ಲಿ. ಆಗ ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ನಳಿನ್ ಕುಮಾರ್ ಕಟೀಲ್ ಎರಡನೇ ಅವಧಿಗೆ ಸಂಸದರರಾಗಿದ್ದರು. ಸುರತ್ಕಲ್ ಭಾಗದ ನಾಗರಿಕರು ಟೋಲ್ ಸಂಗ್ರಹಕ್ಕೆ ತಡೆ ಒಡ್ಡಿ ಸತತ ಪ್ರತಿಭಟನೆ ನಡೆಸುತ್ತಿದ್ದರೂ ಜವಾಬ್ದಾರಿ ಹೊಂದಿದ್ದ ಸಂಸದರು ಟೋಲ್ ವಿರೋಧಿ ಹೋರಾಟಗಾರರ ನೆರವಿಗೆ ಬಂದಿರಲಿಲ್ಲ. ಗಜೆಟಡ್ ಮೂಲಕ ಟೋಲ್ ಬೂತ್ ಆರಂಭಗೊಂಡಿದ್ದರೂ ಆಗ ಆರು ತಿಂಗಳ ತಾತ್ಕಾಲಿಕ ಅವಧಿಗೆ ಎಂದು ಜನರಿಗೆ ಕೇಂದ್ರದ ಹೆದ್ದಾರಿ ಪ್ರಾಧಿಕಾರ ಭರವಸೆ ನೀಡಿತ್ತು. ಹೆಜಮಾಡಿ ಟೋಲ್ ಗೇಟ್ ಸ್ಥಾಪನೆ ಆದ ತಕ್ಷಣ ತೆರವುಗೊಳಿಸುವುದಾಗಿ ತಿಳಿಸಲಾಗಿತ್ತು. 2018 ರಲ್ಲಿ ಹೋರಾಟದ ತೀವ್ರತೆಯ ಪರಿಣಾಮವಾಗಿ ಹೆದ್ದಾರಿ ಪ್ರಾಧಿಕಾರವು ರಾಜ್ಯ ಸರಕಾರದ ಅನುಮೋದನೆಯೊಂದಿಗೆ ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ನವಯುಗ್ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿತ್ತು. ಸರಕಾರದ ನಿರ್ಣಯವನ್ನೇ ಜಾರಿಗೊಳಿಸಲು ಅಂದಿನಿಂದಲೂ ಶಾಸಕರಾಗಿರುವ ಭರತ್ ಶೆಟ್ಟಿಯವರಿಗೆ ಯಾಕೆ ಸಾಧ್ಯವಾಗಿಲ್ಲ ? ಅವರ ಕೈ ಕಟ್ಟಿ ಹಾಕಿದ್ದು ಯಾರು ? ಇದನ್ನೆಲ್ಲ ಮುಚ್ಚಿಟ್ಟು ಗಜೆಟ್ ನೋಟಿಫಿಕೇಷನ್ ಕುರಿತು ಮಾತಾಡುವುದು ಯಾರನ್ನು ಮೆಚ್ಚಿಸಲು ? ಎಂದು ಹೋರಾಟ ಸಮಿತಿ ಶಾಸಕ ಭರತ್ ಶೆಟ್ಟಿಯವರಿಗೆ ಸರಣಿ ಪ್ರಶ್ನೆಗಳನ್ನು ಮಾಡಿದ್ದಾರೆ.
ಹೋರಾಟದ ನೆಪದಲ್ಲಿ ಕೆಲವು ಹೋರಾಟಗಾರರು ಮುಂಚೂಣಿಯಲ್ಲಿ ನಿಂತು ಸ್ವಂತ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕರು ತೀರಾ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ. ಹೋರಾಟ ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಶಾಸಕ ಭರತ್ ಶೆಟ್ಟಿಯವರದ್ದೇ ಸರಕಾರ ಇದೆ. ಯಾವ ಹೋರಾಟಗಾರರು ಏನು ಸ್ವಂತ ಲಾಭ ಮಾಡಿಕೊಂಡಿದ್ದಾರೆ ಎಂದು ಭರತ್ ಶೆಟ್ಟಿ ಅವರು ಬಹಿರಂಗವಾಗಿ ಹೇಳಲಿ, ತನಿಖೆ ಮಾಡಿಸಿ ಕ್ರಮಕೈಗೊಳ್ಳಲಿ ಎಂದು ಸವಾಲುಹಾಕಿದ್ದಾರೆ.
ಟೋಲ್ ಸಂಗ್ರಹ ಗುತ್ತಿಗೆಯನ್ನು ಹಿಂಬಾಗಿಲಿನಿಂದ ಆರಂಭದಿಂದಲೂ ಪಡೆಯುತ್ತಿರುವುದು ಬಿಜೆಪಿ ಬೆಂಬಲಿಗರು ಎಂಬುದು ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ. ಶಾಸಕರು ಇದನ್ನೆಲ್ಲ ಮುಚ್ಚಿಟ್ಟು ಹೋರಾಟವನ್ನು ಬೆಂಬಲಿಸುತ್ತಿರುವ ಜನರ ದಿಕ್ಕುತಪ್ಪಿಸಲು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿರುವ ಮುನೀರ್, ಶಾಸಕರು ತಾವು ಮಾಡಿದ ಆರೋಪಗಳಿಗೆ ಬದ್ಧರಾಗಿದ್ದರೆ ಹೋರಾಟ ಸಮಿತಿಯ ಮುಖಂಡರ ಜೊತೆ ಬಹಿರಂಗ ಚರ್ಚೆಗೆ ಬರಲಿ. ಇಲ್ಲವೇ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಪ್ರಯತ್ನದಿಂದ ಟೋಲ್ ಗೇಟ್ ತೆರವಿನ ಹಂತಕ್ಕೆ ಬಂದಿದೆ ಎಂದು ಹೋರಾಟವನ್ನು ಕುಗ್ಗಿಸಲು ಯತ್ನಿಸುವ ಶಾಸಕ ಭರತ್ ಶೆಟ್ಟಿ ಅವರು, ಇದು ನಿಜ ಎಂದಾದರೆ ಸಂಸದರೊಂದಿಗೆ ಸಮಾಲೋಚಿಸಿ ಟೋಲ್ ಗೇಟ್ ತೆರವಿಗೆ ದಿನಾಂಕ ನಿಗದಿ ಮಾಡಲಿ. ಆ ಮೂಲಕ ಹೇಳಿಕೆಗಳಿಗೆ ನ್ಯಾಯ ಒದಗಿಸಲಿ, ಇದರ ಹೊರತು ಟೋಲ್ ಗೇಟ್ ವಿರೋಧಿ ಹೋರಾಟವನ್ನು ಹತ್ತಿಕ್ಕಲು ಶಾಸಕ ಭರತ್ ಶೆಟ್ಟರಿಗೆ ಅಸಾಧ್ಯ ಎಂದ ಮುನೀರ್ ಕಾಟಿಪಳ್ಳ, 2018 ರಲ್ಲಿ ಟೋಲ್ ಗೇಟ್ ಕೆಡವಿ ಹಾಕುತ್ತೇನೆ ಎಂದು ಹೇಳಿ ಶಾಸಕರು ಆ ನಂತರ ಮರೆತು ಬಿಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.







