ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಚುನಾವಣಾ ಷಡ್ಯಂತ್ರ: ವಿನಯ ಕುಮಾರ್ ಸೊರಕೆ ಟೀಕೆ

ಉಡುಪಿ : ಜಾತ್ರೆ ಮಹೋತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿರುವುದು ಚುನಾವಣೆ ಸಮೀಪಿಸುತ್ತಿರುವಾಗ ನಡೆಸುತ್ತಿರುವ ಷಡ್ಯಂತರ ಆಗಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದ್ದಾರೆ.
ಸೌಹಾರ್ದಯುತ ಕಾಪುವಿನಲ್ಲಿ ಈವರೆಗೆ ಇಂತಹ ಯಾವುದೇ ಸಮಸ್ಯೆಗಳು ಇರಲಿಲ್ಲ. ಈವರೆಗೆ ಎಲ್ಲರೂ ಜಾತಿ ಮತ ಬೇಧವಿಲ್ಲದೆ ವ್ಯವಹಾರಗಳನ್ನು ನಡೆಸುತ್ತಿದ್ದರು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಓರ್ವ ಹಿಂದೂ ಧರ್ಮೀಯ ಕಾಪು ಮಾರಿ ಗುಡಿಯಲ್ಲಿ ನಡೆಯುವ ಮಾರಿಪೂಜೆಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದನ್ನು ನಾವೆಲ್ಲ ಸೌಹಾರ್ದಯುತವಾಗಿ ಪರಿಹರಿಸಿದ್ದೇವೆ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರೂ ಸಮಾನರು. ಇಲ್ಲಿ ವ್ಯವಹಾರ ನಡೆಸಲು ನಿರ್ಬಂಧಿಸುವುದು ಸರಿಯಾದ ಕ್ರಮವಲ್ಲ. ಇದೊಂದು ಚುನಾವಣಾ ಷಡ್ಯಂತ್ರ ಎಂದು ಅವರು ಹೇಳಿದ್ದಾರೆ.
ಒಂದು ಧರ್ಮದ ಧಾರ್ಮಿಕ ಕಾರ್ಯಕ್ರಮಕ್ಕೆ ಇನ್ನೊಂದು ಧರ್ಮದವರನ್ನು ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಹೇಳುವುದು ಸೌಹಾರ್ದತೆಗೆ ಧಕ್ಕ್ಕೆ ತರುವಂತದಾಗಿದೆ ಹಾಗೂ ಸಂವಿಧಾನ ವಿರೋಧಿ ನಿಲುವು ಆಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದ್ದಾರೆ.
ಈಗಾಗಲೇ ಕೊರೋನ ಎಂಬ ಮಹಾಮಾರಿಯಿಂದ ಜನರಿಗೆ ಬದುಕಲು ಕಷ್ಟವಾಗಿದೆ. ಇಂತಹ ಸಮಯದಲ್ಲಿ ಬಡ ವ್ಯಾಪಾರಸ್ಥರಿಗೆ ತಮ್ಮ ದಿನನಿತ್ಯದ ಅವಶ್ಯಕತೆಗೊಸ್ಕರ ವ್ಯಾಪಾರ ಮಾಡಲು ಜಿಲ್ಲಾಡಳಿತ ಮತ್ತು ಸರಕಾರ ತಕ್ಷಣವೇ ಮಧ್ಯ ಪ್ರವೇಶಿಸಿ ಯಾವುದೇ ಜಾತಿ, ಮತಭೇದ ನೋಡದೆ ಈ ಬಡ ಬೀದಿ ಬದಿ ವ್ಯಾಪಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







