ಗಡಿ ಉದ್ವಿಗ್ನತೆಯ ನಡುವೆಯೇ ಈ ವಾರ ದಿಲ್ಲಿಗೆ ಭೇಟಿ ನೀಡಲಿರುವ ಚೀನಾ ವಿದೇಶಾಂಗ ಸಚಿವ

photo: PTI
ಹೊಸದಿಲ್ಲಿ,ಮಾ.23: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಮುಂದಿನ ಕೆಲವು ದಿನಗಳಲ್ಲಿ ದಿಲ್ಲಿಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಪೂರ್ವ ಲಡಾಖ್ನ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಹಿಂಸಾತ್ಮಕ ಘರ್ಷಣೆಗಳ ಬಳಿಕ ಇದು ಹಿರಿಯ ಚೀನಿ ನಾಯಕರೋರ್ವರ ಮೊದಲ ಭಾರತ ಭೇಟಿಯಾಗಲಿದೆ. ಆದಾಗ್ಯೂ ಉಭಯ ದೇಶಗಳು ಈ ಭೇಟಿಯನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ವಿವಿಧ ಹಂತಗಳಲ್ಲಿ ಚೀನಿ ಸೈನಿಕರ ಅತಿಕ್ರಮಣಗಳು ಮತ್ತು ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಉಭಯ ಪಡೆಗಳ ನಡುವೆ ಭೀಕರ ಘರ್ಷಣೆಗಳಿಂದಾಗಿ 2020ರ ಮೇ ತಿಂಗಳಿನಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಬಂಧವು ಹದಗೆಟ್ಟಿದೆ. ಉಭಯ ದೇಶಗಳ ಸೇನೆಗಳು ಹಲವಾರು ಸುತ್ತುಗಳ ಮಾತುಕತೆಗಳನ್ನು ನಡೆಸಿವೆಯಾದರೂ ಹೆಚ್ಚಿನ ಫಲ ನೀಡಿಲ್ಲ.
ಗಲ್ವಾನ್ ಘರ್ಷಣೆಗಳ ಬಳಿಕ ವಾಂಗ್ ಯಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸೆಪ್ಟಂಬರ್ 2020ರಲ್ಲಿ ಮಾಸ್ಕೋದಲ್ಲಿ ಮತ್ತು ಸೆಪ್ಟಂಬರ್ 2021ರಲ್ಲಿ ದುಶಾಂಬೆಯಲ್ಲಿ ಹೀಗೆ ಎರಡು ಸಲ ಪರಸ್ಪರ ಭೇಟಿಯಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಕೆಲವು ಹಿನ್ನಡೆಗಳನ್ನು ಎದುರಿಸಿವೆ ಎಂದು ಈ ತಿಂಗಳ ಆರಂಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದ್ದ ವಾಂಗ್ ಯಿ,ನ್ಯಾಯಯುತ ಮತ್ತು ಸಮಾನ ಇತ್ಯರ್ಥಕ್ಕಾಗಿ ಉಭಯ ದೇಶಗಳು ಸಮಾಲೋಚನೆಗಳ ಮೂಲಕ ಗಡಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಕೆಲವು ಶಕ್ತಿಗಳು ಯಾವಾಗಲೂ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸುತ್ತಿವೆ ಎಂದು ಅಮೆರಿಕವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅವರು ಹೇಳಿದ್ದರು.
ಯಥಾಸ್ಥಿತಿಯಲ್ಲಿ ಯಾವುದೇ ಬದಲಾವಣೆ ಅಥವಾ ಪ್ರದೇಶದಲ್ಲಿ ಎಲ್ಎಸಿಯನ್ನು ಬದಲಿಸುವ ಯಾವುದೇ ಏಕಪಕ್ಷೀಯ ಪ್ರಯತ್ನವನ್ನು ತಾನು ಒಪ್ಪುವುದಿಲ್ಲ ಎಂಬ ಸಂಪೂರ್ಣ ಸ್ಪಷ್ಟತೆಯೊಂದಿಗೆ ಭಾರತವು ಲಡಾಖ್ ಗಡಿ ಬಿಕ್ಕಟ್ಟು ಕುರಿತು ಚೀನಾದೊಂದಿಗೆ ಮಾತುಕತೆಗಳಲ್ಲಿ ತೊಡಗಿಕೊಂಡಿದೆ ಎಂದು ಜೈಶಂಕರ್ ಕಳೆದ ತಿಂಗಳು ಪ್ಯಾರಿಸ್ನಲ್ಲಿ ಚಿಂತನ ಚಿಲುಮೆಯೊಂದರ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದ್ದರು.
ಭಾರತ ಮತ್ತು ಚೀನಾ ಪ್ರತಿಸ್ಪರ್ಧಿಗಳ ಬದಲು ಪಾಲುದಾರರಾಗಬೇಕು ಎಂದೂ ವಾಂಗ್ ಯಿ ಹೇಳಿದ್ದರು.







