ಪತ್ರಕರ್ತನಿಗೆ ಬೆದರಿಕೆ: ಸಲ್ಮಾನ್ ಖಾನ್‌ಗೆ ಸಮನ್ಸ್ ಜಾರಿ ಮಾಡಿದ ಮುಂಬೈ ನ್ಯಾಯಾಲಯ

ಮುಂಬೈ: 2019 ರ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ಸಲ್ಲಿಸಿದ ದೂರಿನ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ರಿಗೆ ಮುಂಬೈಯ ಸ್ಥಳೀಯ ನ್ಯಾಯಾಲಯ ಸಮನ್ಸ್ ನೀಡಿದೆ ಎಂದು ndtv ವರದಿ ಮಾಡಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 504 ಮತ್ತು ಸೆಕ್ಷನ್ 506 ( ಕ್ರಿಮಿನಲ್ ಬೆದರಿಕೆ) ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್. ಖಾನ್ ಮಂಗಳವಾರ ನೀಡಿರುವ ತಮ್ಮ ಆದೇಶದಲ್ಲಿ ಗಮನಿಸಿದ್ದಾರೆ. ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿ ಇಬ್ಬರಿಗೂ ಸಮನ್ಸ್ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಏ. 5ಕ್ಕೆ ಮುಂದೂಡಲಾಗಿದೆ.
ಮುಂಬೈ ಬೀದಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸಲ್ಮಾನ್ ಖಾನ್ ಅವರ ಫೋಟೊಗಳನ್ನು ಕೆಲವು ಮಾಧ್ಯಮದವರು ಕ್ಲಿಕ್ ಮಾಡಲು ಪ್ರಾರಂಭಿಸಿದಾಗ ಸಲ್ಮಾನ್ ಖಾನ್ ಹಾಗೂ ಅಂಗರಕ್ಷಕ ವಾಗ್ವಾದಕ್ಕಿಳಿದಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ನನ್ನೊಂದಿಗೆ ವಾಗ್ವಾದಕ್ಕಿಳಿದ ಸಲ್ಮಾನ್ ಖಾನ್ ಅವರು, ನನಗೆ ಬೆದರಿಕೆಯೊಡ್ಡಿದ್ದಾರೆ ಎಂದು ಪಾಂಡೆ ದೂರು ನೀಡಿದ್ದು, ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದಾರೆ.







