‘ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ' ಎಂದು ನಿಯಮ ರೂಪಿಸಿದ್ದು ಕಾಂಗ್ರೆಸ್: ಸಚಿವ ಮಾಧುಸ್ವಾಮಿ
ಜಾತ್ರೆಗಳಲ್ಲಿ ಇತರ ಧರ್ಮೀಯ ವ್ಯಾಪಾರಸ್ಥರಿಗೆ ನಿರ್ಬಂಧ: ವಿಧಾನಸಭೆಯಲ್ಲಿ ಪ್ರತಿಧ್ವನಿ

ಬೆಂಗಳೂರು, ಮಾ. 23: ‘ಉಡುಪಿ ಜಿಲ್ಲೆ ಕಾಪುವಿನ ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಾಪಾರಸ್ಥರಿಗೆ ನಿರ್ಬಂಧ' ವಿಚಾರ ವಿಧಾನಸಭೆಯಲಿ ಪ್ರತಿಧ್ವನಿಸಿತು.
‘ಸಮಾಜದಲ್ಲಿನ ಕೋಮು ಸಾಮರಸ್ಯ ಕದಡುವ ‘ಕ್ರೂರ ಮನಸ್ಸಿನ ಹೇಡಿ'ಗಳು ಬಹಿರಂಗ ಹೇಳಿಕೆ ನೀಡುವುದು, ಸಾರ್ವಜನಿಕ ಸ್ಥಳದಲ್ಲಿ ಭಿತ್ತಿಪತ್ರ, ಬ್ಯಾನರ್ ಅಂಟಿಸುವುದು ಸರಿಯಲ್ಲ' ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ಷೇಪಿಸಿದ್ದು ಕೆಲ ಕಾಲ ಗದ್ದಲಕ್ಕೆ ಕಾರಣವಾಯಿತು.
ಬುಧವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಖಾದರ್ ಅವರು, ‘ಕೆಲವೊಂದು ಪವಿತ್ರವಾದ ಧಾರ್ಮಿಕ ಕೇಂದ್ರಗಳಲ್ಲಿ ಕೆಲ ಸ್ಥಾಪಿತ ಹಿತಾಸಕ್ತಿಗಳು ಇತರ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕುತ್ತಾರೆ. ಅವರ ಹೆಸರಿನಲ್ಲಿ ಹಾಕುವುದಿಲ್ಲ, ಇದಕ್ಕೆ ಶೇ.95ರಷ್ಟು ಯಾವ ಧರ್ಮದವರು ಬೆಂಬಲ ನೀಡುವುದಿಲ್ಲ' ಎಂದು ಹೇಳಿದರು.
ಈ ವೇಳೆ ಬಿಜೆಪಿ ಸದಸ್ಯರಾದ ಸೋಮಶೇಖರ ರೆಡ್ಡಿ, ಹರೀಶ್ ಪೂಂಜ, ರೇಣುಕಾಚಾರ್ಯ, ರಘುಪತಿ ಭಟ್, ಕೆ.ಜಿ. ಬೋಪಯ್ಯ ಸೇರಿದಂತೆ ಎದ್ದು ನಿಂತು ‘ಯಾರೂ ಹೇಡಿಗಳು' ಎಂದು ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಹಿಜಾಬ್ ವಿಚಾರವಾಗಿ ಹೈಕೋರ್ಟ್ ಆದೇಶ ಬಂದರೂ ಬಂದ್ ಕರೆ ನೀಡುತ್ತಾರೆ. ಖಾದರ್ ಅವರ ಬಳಕೆ ಮಾಡಿದ ‘ಹೇಡಿಗಳು' ಪದ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸ್ಪೀಕರ್ ಕಾಗೇರಿ ಅವರು ಎಷ್ಟು ಬಾರಿ ಮನವಿ ಮಾಡಿದರೂ ಬಿಜೆಪಿ ಸದಸ್ಯರು ಸುಮ್ಮನಾಗಲಿಲ್ಲ. ಏರಿದ ಧ್ವನಿಯಲ್ಲಿ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ಮುಂದುವರಿಸಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಹೆಚ್ಚಾಯಿತು. ಉತ್ತರ ನೀಡಲು ಕಾನೂನು ಸಚಿವ ಮಾಧುಸ್ವಾಮಿ ಮುಂದಾದಾಗಲೂ ಬಿಜೆಪಿ ಸದಸ್ಯರು ಗದ್ದಲದಲ್ಲೇ ಇದ್ದರು.
ಆಗ ಸದಸ್ಯರ ಆಸನದ ಬಳಿಗೆ ಖುದ್ದು ಕಾನೂನು ಸಚಿವ ಮಾಧುಸ್ವಾಮಿ ಅವರೇ ತೆರಳಿ ಸದಸ್ಯರನ್ನು ಸಮಾಧಾನಪಡಿಸಿ ಕುಳಿತುಕೊಳ್ಳುವಂತೆ ಮನವಿ ಮಾಡಿದ ಪ್ರಸಂಗವೂ ನಡೆಯಿತು. ಈ ವೇಳೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿಗೆ ಸೂಚನೆ ನೀಡಿದ ಸ್ಪೀಕರ್, ‘ನಿಮ್ಮ ಪರವಾಗಿ ಕಾನೂನು ಸಚಿವರು ಸಮಾಧಾನಪಡಿಸಲು ಓಡಾಡುತ್ತಿದ್ದಾರೆ, ನೀವು ಹೋಗಿ ಅವರನ್ನು ಕುಳಿತುಕೊಳ್ಳುವಂತೆ ಹೇಳಿ' ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಝಮೀರ್ ಅಹ್ಮದ್ ಖಾನ್, ‘ಯಾರು ಮುಸ್ಲಿಮ್ ಸಮುದಾಯದವರಿಗೆ ನಿರ್ಬಂಧ ಹೇರಿ ಭಿತ್ತಿಪತ್ರ ಹಾಕಿದ್ದಾರೆ ಅವರಿಗೆ ಹೇಡಿಗಳು ಎಂದು ಖಾದರ್ ಹೇಳಿದ್ದಾರೆ’ ಎಂದು ಸಮರ್ಥಿಸಿಕೊಂಡರು. ಬಳಿಕ ಸ್ಪಷ್ಟನೆ ನೀಡಿದ ಖಾದರ್, ‘ನಾನು ಇಲ್ಲಿ ಯಾವುದೇ ಜಾತಿ-ಧರ್ಮದ ಹೆಸರು ಪ್ರಸ್ತಾಪ ಮಾಡಿಲ್ಲ. ಸಮಾಜದ ಸಾಮರಸ್ಯ ಹಾಗೂ ಸೌಹಾರ್ದ ಕಾಪಾಡಬೇಕು. ಹೊಟ್ಟೆ ಪಾಡಿಗಾಗಿ ಬೀದಿಬದಿ ವ್ಯಾಪಾರಸ್ಥರು ಶ್ರಮಪಟ್ಟು ದುಡಿಯುತ್ತಿದ್ದಾರೆ. ಅವರಿಗೆ ಗೌರವ ಕೊಡಬೇಕು. ಎಲ್ಲ್ಲ ಧಾರ್ಮಿಕ ಕ್ಷೇತ್ರದಲ್ಲಿ ಯಾರು ಬೇಕಾದರೂ ವ್ಯಾಪಾರ ಮಾಡಬಹುದು' ಎಂದರು.
ಆದರೆ, ಕೆಲವರು ದ್ವೇಷ, ವೈಮನಸ್ಸು ಹುಟ್ಟಿಸುವ ಕೆಲಸ ಮಾಡುತ್ತಾರೆ. ಬ್ಯಾನರ್, ಭಿತ್ತಿಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಾರೆ. ಅವರ ಹೆಸರು ಹಾಕಲ್ಲ. ಬ್ಯಾನರ್ ಹಾಕುವ ಮೂಲಕ ಸಮಸ್ಯೆ ಸೃಷ್ಟಿ ಮಾಡುತ್ತಿದ್ದಾರೆ. ಕೆಲವು ಕಡೆಯಲ್ಲಿ ಹಿಂದೂಗಳೇ ಅದನ್ನು ತೆಗೆಸಿದ್ದಾರೆ. ಆದರೆ, ಪೊಲೀಸರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಸಮಾಜದಲ್ಲಿ ವೈಮನಸ್ಸು ಮೂಡಿಸಲು ಅವಕಾಶ ಕೊಡಬಾರದು. ಭಿತ್ತಿಪತ್ರ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಖಾದರ್ ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‍ನ ಮತ್ತೋರ್ವ ಸದಸ್ಯ ರಿಝ್ವಾನ್ ಅರ್ಶದ್ ಮಾತನಾಡಿ, ‘ಕರ್ನಾಟಕ ರಾಜ್ಯಕ್ಕೆ ಸಾಮರಸ್ಯದ ಪರಂಪರೆ ಹಾಗೂ ಇತಿಹಾಸ ಇದೆ. ಇದನ್ನು ಕಾಪಾಡಬೇಕು. ಒಂದು ವರ್ಗಕ್ಕೆ ವ್ಯಾಪಾರ ಮಾಡುವುದಕ್ಕೆ ನಿμÉೀಧ ಹೇರುವುದು ಆಘಾತಕಾರಿ. ಯಾವ ಸಂಘಟನೆ ಮಾಡುತ್ತಿದೆ ಅವರಿಗೆ ದೇವಸ್ಥಾನಗಳ ಇತಿಹಾಸ ಗೊತ್ತಿಲ್ಲ. ಜಾನಪದ ಹಾಡುಗಳಲ್ಲಿ ದೇವಸ್ಥಾನದ ಪೂಜೆ ಪುನಸ್ಕಾರದಲ್ಲಿ ಮುಸ್ಲಿಮರು ಜೊತೆಗಿದ್ದ ಬಗ್ಗೆ ಉಲ್ಲೇಖ ಇದೆ. ಬಹಿಷ್ಕಾರ ಸಂಸ್ಕೃತಿ ಸರಿಯಲ್ಲ' ಎಂದು ಆಕ್ಷೇಪಿಸಿದರು.
ನಿಯಮ ರೂಪಿಸಿದ್ದು ಕಾಂಗ್ರೆಸ್: ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ಸಮಾಜದ ಸಾಮರಸ್ಯ, ಶಾಂತಿ ಹಾಳು ಮಾಡಲು ಯಾವ ಸಮುದಾಯಕ್ಕೂ ಸರಕಾರದಿಂದ ಪ್ರೋತ್ಸಾಹ ನೀಡುವುದಿಲ್ಲ. ಆದರೆ, 2002ರಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದತ್ತಿಗಳ ನಿಯಮದಲ್ಲಿ ದೇವಸ್ಥಾನದ ಸಂಸ್ಥೆ ಜಮೀನು ಸಮೀಪದ ಕಟ್ಟಡ, ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ' ಎಂದು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ನಿಯಮ ರೂಪಿಸಿದೆ' ಎಂದು ಪ್ರತಿಯನ್ನು ಪ್ರದರ್ಶಿಸಿದರು.
ಸಾರ್ವಜನಿಕ ಸ್ಥಳದಲ್ಲಿ ಸಾಮರಸ್ಯ ಕದಡುವಂತಹ ಯಾವುದೇ ಬ್ಯಾನರ್ ಅಥವಾ ಭಿತ್ತಿಪತ್ರ ಹಾಕಿದ್ದರೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಮಾಧುಸ್ವಾಮಿ ಇದೇ ವೇಳೆ ಸ್ಪಷ್ಟಪಡಿಸಿದರು.
ನಿಮ್ಮದೇ ಸರಕಾರದ ಅವಧಿಯಲ್ಲಿ ಮಾಡಿದ ನಿಯಮವನ್ನು ಪಾಲನೆ ಮಾಡಿದ್ದರೆ ಹೇಗೆ? ನಿಯಮವನ್ನು ಸರಿಮಾಡುವುದು, ಬಿಡುವುದು ಬೇರೆ ವಿಷಯ. ಪ್ರಸ್ತುತ ನಿಯಮವನ್ನು ಅನುಸರಿಸಬೇಕು. ನಾವು ಮಾಡಿರುವ ತಪ್ಪಲ್ಲ ಇದು. ಧಾರ್ಮಿಕ ಸ್ಥಳದ ಆವರಣದಿಂದ ಹೊರಗೆ ಇದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಒಳಗೆ ಇದ್ದರೆ ನೀವು ತಿದ್ದಿಕೊಳ್ಳಬೇಕು.
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ







