ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನವೀಕೃತ ವೃತ್ತ ಉದ್ಘಾಟನೆ

ಮಂಗಳೂರು : ಕನ್ನಡಕ್ಕೆ ಪ್ರಪ್ರಥಮ ರಾಷ್ಟ್ರಕವಿ ಎಂಬ ಗೌರವ ತಂದುಕೊಟ್ಟ ಮಂಜೇಶ್ವರ ಗೋವಿಂದ ಪೈಯ ಹೆಸರಿನಲ್ಲಿರುವ ನಗರದ ಕೊಡಿಯಾಲ್ ಬೈಲ್ ನ ನವೀಕೃತ ವೃತ್ತವನ್ನು ಬುದವಾರ ಶಾಸಕ ಡಿ.ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ವನಿತಾ ಅಚ್ಯುತ್ ಪೈ ಅವರ ಸ್ಮರಣಾರ್ಥ ಅವರ ಮಕ್ಕಳ ಕೊಡುಗೆಯಾಗಿ ರಚನೆಯಾದ ಈ ವೃತ್ತದ ಒಳಗಿರುವ ಪುರಾತನ ಕಾಲದ ಬಾವಿಯನ್ನು ಹಾಗೆ ಉಳಿಸಲಾಗಿದ್ದು, ಅದರ ನೀರನ್ನೇ ಕಾರಂಜಿಯಂತೆ ವೃತ್ತದಲ್ಲಿ ಚಿಮ್ಮಿಸಿ ಇನ್ನಷ್ಟು ಆಕರ್ಷಣೀಯ ಮಾಡಲಾಗಿದೆ. ವೃತ್ತದ ಒಳಗೆ ಹೂ ಮತ್ತು ಹುಲ್ಲಿನ ಮೂಲಕ ಸೌಂದರ್ಯಕ್ಕೆ ಆದ್ಯತೆ ನೀಡಲಾಗಿದೆ. ವೃತ್ತದ ಸುತ್ತಲೂ ಕೆತ್ತನೆಯ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಸಾಂಪ್ರದಾಯಿಕ ಕುಸುರಿ ಕಾಣಿಸುತ್ತಿದೆ. ಕಾರಂಜಿ ಮತ್ತಿತರ ವಿದ್ಯುತ್ ಅಲಂಕಾರಿಕ ವಸ್ತುಗಳ ಅಳವಡಿಕೆ ನಡೆಸಲಾಗಿದೆ.
ರಾಷ್ಟ್ರಕವಿ ಗೋವಿಂದ ಪೈ ಕೈಯಲ್ಲಿ ನವಭಾರತ ಪತ್ರಿಕೆಯನ್ನು ಹಿಡಿದು ಓದುತ್ತಾ ಕುಳಿತಿರುವ ಭಂಗಿಯಲ್ಲಿರುವ ಕಂಚಿನ ಪುತ್ಥಳಿಯನ್ನೂ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದೆ.
ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಶಶಿಧರ ಹೆಗ್ಡೆ, ಭಾಸ್ಕರ್ ಕೆ. ಮತ್ತಿತರರು ಉಪಸ್ಥಿತರಿದ್ದರು.





