ಬೆಟ್ಟಂಪಾಡಿಯಲ್ಲಿ ಅಕ್ರಮ ಗೆಸ್ಟ್ ಹೌಸ್ ನಿರ್ಮಾಣವಾಗುತ್ತಿದ್ದು, ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ:ಸುಕೇಶ್ ಉಚ್ಚಿಲ ಆರೋಪ
ಉಳ್ಳಾಲ: ಕೇರಳ ಗಡಿ ಪ್ರದೇಶವಾದ ಬೆಟ್ಟಂಪಾಡಿಯಲ್ಲಿ ಅಕ್ರಮ ಗೆಸ್ಟ್ ಹೌಸ್ ನಿರ್ಮಾಣ, ಬೋಟಿಂಗ್ ನಡೆಯುತ್ತಿದ್ದು, ಈ ಬಗ್ಗೆ ಇಲಾಖೆಗಳಿಗೆ ದೂರು ನೀಡಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೀನುಗಾರ ಮುಖಂಡ ಸುಕೇಶ್ ಉಚ್ಚಿಲ ಆರೋಪಿಸಿದ್ದಾರೆ.
ಅವರು ಬೆಟ್ಟಂಪಾಡಿಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಮೇಶ್ವರದ ಬಟ್ಟಪ್ಪಾಡಿಯಲ್ಲಿ ಅನಧಿಕೃತ ಗೆಸ್ಟ್ ಹೌಸ್, ಕಾಂಡ್ಲಾ ಗಿಡ ನಾಶ, ಸ್ಥಳೀಯ ಮೀನುಗಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೈಕೋರ್ಟ್‍ನಲ್ಲಿ ದಾವೆ ಹೂಡಲಾಗಿದೆ. ಶೀಘ್ರದಲ್ಲೇ ತೀರ್ಪು ಸಾಂಪ್ರದಾಯಿಕ ಮೀನುಗಾರರ ಪರವಾಗಿ ಬರುವ ವಿಶ್ವಾಸವಿದೆ. ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ದಂಧೆಗಳಿಗೂ ಶೀಘ್ರವೇ ಕೊನೆಗೊಳ್ಳಬೇಕು ಎಂದು ಉಚ್ಚಿಲ ಬಟ್ಟಪ್ಪಾಡಿ ಪರಿಸರದ ಮೀನುಗಾರ ಮುಖಂಡ ಸುಖೇಶ್ ಉಚ್ಚಿಲ್ ಹೇಳಿದರು.
ಬೆಟ್ಟಂಪಾಡಿ ಯಲ್ಲಿ 150 ಮೀನುಗಾರರ ಮನೆ ಇದೆ. ಕೊರ್ಟ್ ಕಾನೂನು ಪಾಲಿಸುವುದಾದರೆ ಇಲ್ಲಿ ಅಭಿವೃದ್ಧಿ ಮಾಡಲು ಆಗುವುದಿಲ್ಲ. ನಿರ್ವಹಣೆ ಮಾತ್ರ ಮಾಡಲಾಗುತ್ತದೆ. ಅದಿಲ್ಲಿ ಆಗುತ್ತಿಲ್ಲ. ಇಲ್ಲಿ ಕಾಂಡ್ಲಾ ಮರ ಕಡಿದು ಹಾಕಲಾಗಿದೆ ಈ ಬಗ್ಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಬಂಧನ ಆಗಿಲ್ಲ. ಪ್ರಕಾಶ್ ಶೆಟ್ಟಿ ಎಂಬವರು ಪರವಾನಿಗೆ ಇಲ್ಲದೆ ಬೋಟಿಂಗ್ ನಡೆಸಿ ಈ ಕೃತ್ಯ ಎಸಗಿದ್ದಾರೆ. ಬೋಟಿಂಗ್ ನಿಂದ ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ಕಾಂಡ್ಲಾ ಮರದಿಂದ ಬಹಳಷ್ಟು ಮನೆ ರಕ್ಷಣೆ ಆಗಿದೆ. ಅದನ್ನು ಕಡಿದಿರುವುದರಿಂದ ತೊಂದರೆ ಆಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಸಂರಕ್ಷಣಾ ವಲಯ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ದರು.
ಬೆಟ್ಟಂಪಾಡಿ ಪರಿಸರ ದಲ್ಲಿ ಬಹಳಷ್ಟು ಮನೆ ಇದ್ದರೂ ಇಲ್ಲಿಗೆ ಸುರಕ್ಷಿತೆ ಇಲ್ಲ.ಸರಿಯಾದ ರಸ್ತೆ , ದಾರಿ ಇಲ್ಲ. ಇದ್ದ ರಸ್ತೆ ಕಡಲಿನಬ್ಬರದ ವೇಳೆ ಸಮುದ್ರ ಪಾಲಾಗಿ ಹೋಗಿದೆ. ತದನಂತರ ಬೆಳವಣಿಗೆ ಆಗಲಿಲ್ಲ.ಇದರಿಂದ ಬಹಳಷ್ಟು ಮೀನುಗಾರರ ಕುಟುಂಬ ಸಂಕಷ್ಟಕೀಡಾಗಿದೆ ಎಂದರು.
ಸಮುದ್ರ ತೀರದಿಂದ ಕೇರಳ ಸಂಪರ್ಕಿಸುವ ಸೋಮೇಶ್ವರ ಪುರಸಭೆಯ ಬಟ್ಟಪ್ಪಾಡಿ ಪ್ರದೇಶದಲ್ಲಿರುವ 18 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಲೀಸ್ ಗೆ ಪುರಸಭೆ ನೀಡಿದೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರದ ಮುಂಬೈಗೆ ಸೇರಿದ ಕೃಷ್ಣ ಪ್ಯಾಲೇಸ್, ಹೊಟೇಲ್ಸ್, ರೆಸಾರ್ಟ್ ಗೆ ಬೀಚ್ ನಿರ್ವಹಣೆಗೆಂದು ನೀಡಲಾಗಿದೆ. ಪ್ರಕಾಶ್ ಶೆಟ್ಟಿ ಎನ್ನುವ ವ್ಯಕ್ತಿ ಲೀಸ್ ಕೊಟ್ಟ ದಾಖಲೆಯ ಝೆರಾಕ್ಸ್ ಪ್ರತಿಯನ್ನು ಹಿಡಿದುಕೊಂಡು ತಾನೇ ಮಾಲೀಕನಂತೆ ವರ್ತಿಸಿ ಅನಧಿಕೃತ ಕಟ್ಟಡ, ಪ್ರವಾಸಿಗರನ್ನು ಕರೆತರುವ ಕೆಲಸದೊಂದಿಗೆ ಕಾಂಡ್ಲಾ ವನವನ್ನು ನಾಶ ಮಾಡಿದ್ದಾರೆ. ಪ್ರದೇಶದಲ್ಲಿ ಅನಧಿಕೃತ ಬೋಟಿಂಗ್ ಮಾಡಲಾಗುತ್ತಿದೆ. ಕೋಸ್ಟ್ ಗಾರ್ಡ್, ಪೊಲೀಸ್ ಠಾಣೆ, ಪುರಸಭೆ ಅನುಮತಿ ಪಡೆಯದೆ ಬೋಟಿಂಗ್ ಮಾಡಲಾಗುತ್ತಿದೆ ಇಲ್ಲಿ ಹಲವು ಮಾಫೀಯ ನಡೆಯುತ್ತಿದೆ.
ರಾತ್ರಿ ಡಿಜೆ ಹಾಕಿ ಡ್ಯಾನ್ಸ್ ಮಾಡುವವರು ಇದ್ದಾರೆ. ಇದರಿಂದ ರಾತ್ರಿ ವೇಳೆ ಮೀನುಗಾರರಿಗೂ ಮೀನುಗಾ ರಿಕೆಗೂ ತೊಂದರೆ ಆಗುತ್ತಿದೆ. ರಾತ್ರಿ ಬೋಟಿಂಗ್ ವ್ಯವಹಾರ ಕೂಡಾ ನಡೆಯುತ್ತವೆ.ಅಲ್ಲದೇ ಪರವಾನಿಗೆ ಇಲ್ಲದೆ ಕೆಲವು ಚಿತ್ರೀಕರಣ ನಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡಾ ಸ್ಥಳೀಯ ಸಂಸ್ಥೆ, ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ರಾಮಚಂದ್ರನ್ ಬೈಕಂಪಾಡಿ ಮಾತನಾಡಿ, ಮೀನು ಗಾರರಿಗೆ ಬಹಳಷ್ಟು ಅನ್ಯಾಯ ಇಲ್ಲಿ ಆಗಿದೆ . ಅನ್ಯಾಯ ದ ವಿರುದ್ಧ ಕಳೆದ 10 ವರ್ಷ ದಿಂದ ಹೋರಾಟ ನಡೆಯುತ್ತಿದೆ. ಆದರೆ ಸೂಕ್ತ ಪರಿಹಾರ ಆಗಲಿಲ್ಲ. ಬೆಟ್ಟಂಪಾಡಿ ಸೂಕ್ಷ್ಮ ಪರಿಸರ. ಈ ವಲಯವನ್ನು ಸಂರಕ್ಷಿತ ವಲಯ ಎಂದು ಘೋಷಣೆ ಮಾಡಬೇಕು.ಅಕ್ರಮ ಮಾಫಿಯಾ ನಿಲ್ಲಬೇಕು. ಪ್ರವಾಸೋದ್ಯಮ ಹಾಗೂ ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಬೆಟ್ಟಂಪಾಡಿ ಸಂರಕ್ಷಣಾ ವಲಯ ಎಂದು ಘೋಷಣೆ ಮಾಡಿ ಈ ಪರಿಸರದಲ್ಲಿ ವಾಸ ಮಾಡುವ ಮೀನುಗಾರರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸುದ್ಧಿಗೋಷ್ಠಿಯಲ್ಲಿ ಬಟ್ಟಂಪಾಡಿ ನಿವಾಸಿಗಳಾದ ರಂಜಿತ್ ಉಚ್ಚಿಲ್, ಶಬೀರ್, ವಸಂತ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.