ಶಂಕಿತ ಗೂಢಚಾರರ ಪಟ್ಟಿಯಲ್ಲಿ ರಶ್ಯದ 45 ರಾಜತಾಂತ್ರಿಕರು: ಪೋಲ್ಯಾಂಡ್
ವಾರ್ಸಾ, ಮಾ.23: ರಶ್ಯದ 45 ರಾಜತಾಂತ್ರಿಕರನ್ನು ಶಂಕಿತ ಗೂಢಚಾರರೆಂದು ಗುರುತಿಸಿದ್ದು ಅವರನ್ನು ದೇಶದಿಂದ ಹೊರಹಾಕುವಂತೆ ವಿದೇಶ ವ್ಯವಹಾರ ಇಲಾಖೆಗೆ ಸೂಚಿಸಲಾಗಿದೆ ಎಂದು ಪೋಲ್ಯಾಂಡಿನ ಆಂತರಿಕ ಭದ್ರತಾ ಏಜೆನ್ಸಿ ಎಬಿಡಬ್ಲ್ಯೂವಿನ ವಕ್ತಾರರು ಬುಧವಾರ ಹೇಳಿದ್ದಾರೆ.
ರಾಜತಾಂತ್ರಿಕ ಚಟುವಟಿಕೆಯ ನೆಪದಲ್ಲಿ ಪೋಲ್ಯಾಂಡ್‌ನಲ್ಲಿ ಬೇಹುಗಾರಿಕೆಯಲ್ಲಿ ನಿರತರಾಗಿದ್ದ 45 ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದನ್ನು ವಿದೇಶಾಂಗ ಇಲಾಖೆಗೆ ರವಾನಿಸಲಾಗಿದೆ. ಅವರನ್ನು ಪೋಲ್ಯಾಂಡ್ ದೇಶದ ವ್ಯಾಪ್ತಿಯಿಂದ ಹೊರದಬ್ಬಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಎಬಿಡಬ್ಲ್ಯೂ ವಕ್ತಾರ ಸ್ಟ್ಯಾನಿಸ್ಲಾವ್ ಝರಿನ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ರಶ್ಯದ ಗೂಢಚಾರ ಇಲಾಖೆ ಪರ ಕೆಲಸ ಮಾಡುತ್ತಿದ್ದ ಪೋಲ್ಯಾಂಡ್ ಪ್ರಜೆಯೊಬ್ಬನನ್ನು ಶಂಕೆಯ ಮೇಲೆ ಬಂಧಿಸಿದ್ದು ಈತ ವಾರ್ಸಾದ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ಹಲವಾರು ರಶ್ಯನ್ ರಾಜತಾಂತ್ರಿಕ ಸಿಬಂದಿಗಳೊಂದಿಗೆ ಸಂಪರ್ಕದಲ್ಲಿರುವುದು ಪತ್ತೆಯಾಗಿದ್ದು ಈತ ಪೋಲ್ಯಾಂಡ್‌ನ ಆಂತರಿಕ ಹಾಗೂ ಬಾಹ್ಯ ಭದ್ರತೆಗೆ ತೀವ್ರ ಅಪಾಯಕಾರಿ ಎಂದು ಎಬಿಡಬ್ಲ್ಯೂ ವಕ್ತಾರರು ಹೇಳಿದ್ದಾರೆ.





